ನ್ಯೂಸ್

ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ: ಪ್ರಧಾನಿ ಸಂತಾಪ

ಒಡಿಶಾ: ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ. 88 ವರ್ಷದ ಶಾಂತಾ ದೇವಿ ಭಾನುವಾರ ರಾತ್ರಿ ರಾಯಗಡ ಜಿಲ್ಲೆಯ ಗುಣಪುರದ ತಮ್ಮ ನಿವಾಸದಲ್ಲಿ ಕೊನೆಯುಸಿಳೆದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಎದೆನೋವು ಕಾಣಿಸಿಕೊಂಡು ಪ್ರಜ್ಞಾಹೀನರಾಗಿ ಶಾಂತಿ ದೇವಿ ನಿನ್ನೆ ಕುಸಿದು ಬಿದ್ದಿದ್ದಾರೆ. ಮನೆಗೆ ಬಂದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 1934ರ ಏಪ್ರಿಲ್ 18ರಂದು ಬಾಲಸೋರ್‌ನಲ್ಲಿ ಜನಿಸಿದ ಶಾಂತಿ ದೇವಿ ಡಾ. ರತನ್ ದಾಸ್ ಎಂಬುರನ್ನು ಮದುವೆ ಆದರು. ಬಳಿಕ ಪತಿಯ ಸಹಕಾರದೊಂದಿಗೆ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಶಾಂತಾದೇವಿ, ಕುಷ್ಠ ರೋಗಿಗಳ ಆರೈಕೆಗಾಗಿ ಆಶ್ರಮವೊಂದನ್ನೂ ಸ್ಥಾಪಿಸಿ ಹಲವರ ಕಷ್ಟಕ್ಕೆ ಸ್ಪಂದಿಸಿದ್ದರು. ಇವರ ಸೇವೆಗೆ ಪದ್ಮಶ್ರೀ ಪ್ರಶಸ್ತಿ, ಜಮುನಾಲಾಲ್ ಬಜಾಜ್ ಪ್ರಶಸ್ತಿ, ರಾಧಾನಾಥ್​ ರಥ್​ ಶಾಂತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಭಾನುವಾರ ರಾತ್ರಿ ಎದೆನೋವು ಕಾಣಿಸಿಕೊಂಡು ಮನೆಯಲ್ಲೇ ಶಾಂತಾದೇವಿ ಕುಸಿದು ಬಿದ್ದರು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಶಾಂತಾದೇವಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. 'ಶಾಂತದೇವಿ ಜೀ ಅವರು ಬಡವರು ಮತ್ತು ಹಿಂದುಳಿದವರ ಧ್ವನಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ. ಕಷ್ಟ ನಿವಾರಿಸಲು, ಆರೋಗ್ಯಕರ ಮತ್ತು ನ್ಯಾಯಯುತ ಸಮಾಜ ರಚಿಸಲು ಅವರು ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರ ನಿಧನದ ಸುದ್ದಿ ಕೇಳಿ ನೋವಾಗಿದೆ. ಓಂ ಶಾಂತಿ' ಎಂದು ಟ್ವೀಟ್​ ಮಾಡಿದ್ದಾರೆ.

'ಖ್ಯಾತ ಸಾಮಾಜಿಕ ಕಾರ್ಯಕರ್ತೆ ಶಾಂತಾದೇವಿ ಅವರ ನಿಧನ ಸುದ್ದಿ ದುಃಖತರಿಸಿದೆ. ಶಿಕ್ಷಣದ ಮೂಲಕ ಬುಡಕಟ್ಟು ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಅವರು ಮಾಡಿದ ಅವಿರತ ಶ್ರಮ ಎಂದಿಗೂ ಜೀವಂತ. ಶಾಂತಾದೇವಿ ಅವರ ಅಗಲಿಕೆ ನೋವನ್ನು ತಡೆಯುವ ಶಕ್ತಿಯನ್ನು ಆ ಭಗಂವತ ಕುಟುಂಬಸ್ಥರಿಗೆ ನೀಡಲಿ. ಓಂ ಶಾಂತಿ' ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.