ಬೆಂಗಳೂರು: ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ನೀಲಿ’ ಸಿನಿಮಾವು ಸದ್ಯ ಗಾಂಧಿನಗರದಲ್ಲಿ ಸದ್ದು ಮಾಡದೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿ, ಇದೀಗ ಸುದ್ದಿಯಾಗಲು ಮುಂದಾಗಿದೆ. ಇತ್ತೀಚೆಗಷ್ಟೇ ಪ್ರಚಾರದ ಸಲುವಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿಸಿದೆ.
ಕಾಮಿಡಿ, ಹಾರರ್, ಸೆಂಟಿಮೆಂಟ್, ಸಾಹಸ ಇವೆಲ್ಲವೂ ಕೂಡಿರುವ ಚಿತ್ರ ಇದಾಗಿದ್ದು, ಬಣ್ಣದ ಬದಲಿಗೆ ಹೆಣ್ಣಿನ ರಹಸ್ಯವನ್ನು ಹೇಳಲಿದೆ. ಮನುಷ್ಯನಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಏನೇನು ಸರ್ಕಸ್ ಮಾಡುತ್ತಾನೆ? ಅದಕ್ಕಾಗಿ ಯಾವ ದಾರಿ ಹಿಡಿಯುತ್ತಾನೆ? ಆ ಸಮಯದಲ್ಲಿ ಆತನ ಬದುಕು ಏನಾಗುತ್ತದೆ ಎಂಬುದು ಚಿತ್ರದ ಸಾರಾಂಶವಾಗಿದೆ. ದುಡ್ಡಿಗಾಗಿ ಆಸೆ ಪಡಬೇಡಿ. ಅದು ನಮ್ಮನ್ನು ಏನು ಬೇಕಾದರೂ ಮಾಡಿಸುತ್ತದೆ ಎಂಬ ಸಂದೇಶವನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ.
ಪಿಪಿ ಪ್ರೊಡಕ್ಷನ್ ಅಡಿಯಲ್ಲಿ ಎಳೆಯೂರು ಪಿಳ್ಳಗೌಡರು ಚಿತ್ರದ ನಿರ್ಮಾಣ ಹಾಗೂ ನಿರ್ದೇಶನ ಜವಾಬ್ದಾರಿ ತೆಗದುಕೊಂಡಿದ್ದಾರೆ. ನಾಲ್ಕಾರು ಕಿರುಚಿತ್ರಗಳಲ್ಲಿ ನಟಿಸಿರುವ ಗುಲ್ಬರ್ಗಾ ಮೂಲದ ಪ್ರೇಮಸಾಗರ್ ತಡಕಲ್ ಈ ಚಿತ್ರದ ನಾಯಕರಾಗಿದ್ದು, ಪ್ರೇರಣ ಮತ್ತು ಸುಪ್ರಿತಾರಾಜ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇವರೊಟ್ಟಿಗೆ ಮೈಕೋ ಶಿವಕುಮಾರ್, ಸಿದ್ದು ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಬೃಹತ್ ಕಟ್ಟಡ ಉದ್ಘಾಟಿಸಲಿರೋ ಪ್ರಧಾನಿ ಮೋದಿ: ವಜ್ರಗಳ ವ್ಯಾಪಾರಕ್ಕೆ ಮೀಸಲು..ಇದು ಇರುವುದಾದರೂ ಎಲ್ಲಿ?
ಮೂರು ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಅಜಯ್, ಸಂಕಲನ ಆರ್.ಅನಿಲ್ ಕುಮಾರ್ ಮಾಡಿದ್ದಾರೆ. ಬೆಂಗಳೂರು,ದೇವನಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರವು ಸೆನ್ಸಾರ್ ಅಂಗಳಕ್ಕೆ ಹೋಗಲು ಸಕಲ ತಯಾರಿಗಳನ್ನು ಮಾಡಿಕೊಂಡಿದೆ.