ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ನಾದಬ್ರಹ್ಮ ಹಂಸಲೇಖ ಸಾಥ್ ಕೊಟ್ಟಿದ್ದು, ಇದಕ್ಕಾಗಿಯೇ 2 ಹಾಡು ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜ.9ರಿಂದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ನೀಡಬೇಕು ಎಂದು ಹಲವು ಸಂಘಟನೆಗಳಿಗೆ ಆಹ್ವಾನ ನೀಡಲಾಗುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಡಿಕೆಶಿ ಮನವಿ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಕಲಾವಿದರನ್ನೂ ಈ ಹೋರಾಟಕ್ಕೆ ಕರೆ ತರುವಂತೆ ಹಿರಿಯ ನಟಿಯರಾದ ಉಮಾಶ್ರೀ, ಜಯಮಾಲಾ ಮತ್ತು ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅಷ್ಟೇ ಅಲ್ಲ, ಖುದ್ದು ಡಿಕೆಶಿ ಕೂಡ ನಟರಿಗೆ ಕರೆ ಮಾಡಿ ಆಹ್ವಾನಿಸಲಿದ್ದಾರೆ. ಹಂಸಲೇಖ ಅವರು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದು, ಮೇಕೆದಾಟು ಪಾದಯಾತ್ರೆ ಕುರಿತು 2 ಹಾಡು ಬರೆಯುತ್ತಾರಂತೆ.
ಪೇಜಾವರ ಶ್ರೀಗಳ ಬಗ್ಗೆ ಇತ್ತೀಚಿಗೆ ಹಂಸಲೇಖ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣ ಆಗಿತ್ತು. ನಂತರ ಅವರು ಕ್ಷಮೆಯನ್ನೂ ಕೇಳಿದ್ದರು. ಇದರ ಬೆನ್ನಲ್ಲೇ ಹಂಸಲೇಖ ಪರವಾಗಿ ಕಾಂಗ್ರೆಸ್ ನಾಯಕರು ನಿಂತಿದ್ದರು. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಂಸಲೇಖ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ಸ್ಮರಿಸಬಹುದು.
ನಮ್ಮ ನೀರು, ನಮ್ಮ ಹಕ್ಕು. ಪಾದಯಾತ್ರೆಯಲ್ಲಿ ಎಲ್ಲ ದಿನವೂ ನಡೆಯಿರಿ ಅಂತ ನಾನು ಹೇಳಲ್ಲ. ಒಂದು ದಿನ ಅಥವಾ ಅರ್ಧ ದಿನ ಬೇಕಿದ್ದರೂ ನಡೆಯಬಹುದು. ಎಲ್ಲರೂ ಬನ್ನಿ ಎಂದು ಡಿಕೆಶಿ ಆಹ್ವಾನಿಸಿದ್ದಾರೆ.