ಲಖನೌ: ತಂದೂರಿ ರೊಟ್ಟಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೋಟೆಲ್ನಲ್ಲಿ ಟೇಬಲ್ ಮೇಲೆ ತಂದೂರಿ ರೊಟ್ಟಿ ಜತೆಗೆ ಯಾವುದಾದರೂ ಕರಿ ಬಂದಿತೆಂದರೆ ಬಾಯಿ ಚಪ್ಪರಿಸಿಕೊಂಡು ತಿಂದುಬಿಡುತ್ತೇವೆ. ಆದರೆ ಕೆಲವು ಪಾಪಿಗಳು ಅದೆಷ್ಟರ ಮಟ್ಟಿಗೆ ಹೊಲಸು ಬುದ್ಧಿ ಇಟ್ಟುಕೊಂಡಿರುತ್ತಾರೆಂದರೆ, ಜನರು ತಿನ್ನುವ ರೊಟ್ಟಿಯಲ್ಲಿ ತಮ್ಮ ಎಂಜಲೇ ಇರಲಿ ಎನ್ನುವಷ್ಟು ಕೀಳಾಗಿ ಯೋಚಿಸುತ್ತಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮುರಾದ್ನಗರದಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಿಸಿಲಲ್ಲಿ ನಿಂತು ತಂದೂರಿ ರೊಟ್ಟಿ ತಯಾರಿಸುತ್ತಿದ್ದಾನೆ. ಆದರೆ ರೊಟ್ಟಿಯನ್ನು ಮಾಡುವಾಗ ಸುಮ್ಮನಾಗದ ಆತ, ಅದನ್ನು ಬೇಯಿಸುವ ಮೊದಲು ತನ್ನ ಎಂಜಲನ್ನು ಅದಕ್ಕೆ ತುಪ್ಪಿ ನಂತರ ಬೇಯಿಸುತ್ತಿದ್ದಾನೆ. ಈ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋವನ್ನು ಗಾಜಿಯಾಬಾದ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆ ಕೃತ್ಯ ಮಾಡಿದವನಿಗಾಗಿ ಬಲೆ ಬೀಸಿದ್ದಾರೆ. ಆತನ ಹೆಸರು ಮೊಹ್ಸಿನ್ ಎಂದು ತಿಳಿದುಬಂದಿದ್ದು, ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ