ರಾಯ್ಪುರ/ನವದೆಹಲಿ: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ದುಡಿಮೆಯೂ ಇಲ್ಲದೆ, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ನಮ್ಮೂರು ತಲುಪಿದರೆ ಸಾಕು ಎಂದು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಬಸ್, ರೈಲು ಸೌಲಭ್ಯ ಇಲ್ಲದ ಕಾರಣ ತಮ್ಮ ಊರಿಗೆ ಹೋಗಲು ಸರಕು ಸಾಗಣೆ ಟ್ರಕ್ಗಳನ್ನು ಆಶ್ರಯಿಸುತ್ತಿದ್ದಾರೆ.
ದಾರಿಯಲ್ಲಿ ಬರುವ ಟ್ರಕ್ಗಳ ಚಾಲಕರನ್ನು ಕಾಡಿಬೇಡಿ, ಅವರು ಕೇಳಿದಷ್ಟು ಹಣಕೊಟ್ಟು, ಕೂರಲು ಇರುವ ಸ್ವಲ್ಪ ಸ್ಥಳದಲ್ಲೇ ಕುಳಿತು ತಮ್ಮ ಊರಿಗೆ ಹೋಗುತ್ತಿದ್ದಾರೆ. ಹೀಗೆ ಒಂದು ಕುಟುಂಬ ಟ್ರಕ್ ಏರುವ ಮುನ್ನ ಲಾರಿಯ ಕ್ಲೀನರ್ ಕೈಗೆ ಕೊಡುವ ಎಳೆ ಮಕ್ಕಳನ್ನು, ಮೂಟೆಗಳ ರೀತಿಯಲ್ಲಿ ಲಾರಿಯ ಮೇಲೆ ಎಸೆಯುತ್ತಿರುವ ದೃಶ್ಯ ಎಂಥ ಕಲ್ಲೆದೆಯ ಮನುಷ್ಯನನ್ನೂ ಕರಗಿಸುತ್ತದೆ.
ಛತ್ತೀಸ್ಗಢದಲ್ಲಿ ಕಂಡುಬಂದ ಈ ದೃಶ್ಯ, ತಮ್ಮ ಊರಿಗೆ ಮರಳಬೇಕೆಂದು ಪಣ ತೊಟ್ಟಿರುವ ವಲಸೆ ಕಾರ್ಮಿಕರ ದುಃಸ್ಥಿತಿ ಎಂಥದ್ದು ಎಂಬುದನ್ನು ತೋರಿಸಿಕೊಡುತ್ತದೆ. ಒಂದು ಕೈಯಲ್ಲಿ ಹಗ್ಗವನ್ನು ಹಿಡಿದಿರುವ ವ್ಯಕ್ತಿ ಇನ್ನೊಂದು ಕೈಯಲ್ಲಿ ಎಳೆ ಮಗುವನ್ನು ಪಡೆದುಕೊಂಡು, ಅದನ್ನು ಮೂಟೆಯಂತೆ ಟ್ರಕ್ನ ಮೇಲಕ್ಕೆ ಎಸೆಯುವ ವಿಡಿಯೋ ತುಣಕನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮನೆ ಬಾಗಿಲಿಗೇ ಸರಬರಾಜಾಗಲಿದೆ ಮದ್ಯ
ಇದೇ ದೃಶ್ಯದ ಮತ್ತೊಂದು ಭಾಗದಲ್ಲಿ ಸೀರೆಯುಟ್ಟಿರುವಾಕೆ ಹಗ್ಗ ಹಿಡಿದು ಟ್ರಕ್ ಮೇಲೇರಲು ಪಡಿಪಾಟಲು ಪಡುತ್ತಾಳೆ.
ತಾವೆಲ್ಲರೂ ತೆಲಂಗಾಣದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದವರು. ಲಾಕ್ಡೌನ್ ಹಿನ್ನೆಲೆಯಲ್ಲಿ ಜಾರ್ಖಂಡ್ನಲ್ಲಿರುವ ಮನೆಗೆ ಮರಳಲು ಯತ್ನಿಸುತ್ತಿದ್ದೇವೆ. ಅಲ್ಲಿಗೆ ತೆರಳಲು ಬಸ್, ರೈಲು ಸೌಕರ್ಯ ಇಲ್ಲದ ಕಾರಣ ಛತ್ತೀಸಗಢದಲ್ಲಿ ಸಿಕ್ಕ ಟ್ರಕ್ ಅನ್ನು ಹತ್ತುತ್ತಿರುವುದಾಗಿ ಕಾರ್ಮಿಕರು ಅಲವತ್ತುಕೊಂಡಿದ್ದಾರೆ.
ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್ ಸ್ಪೆಶಲ್ ರೈಲುಗಳ ಸಂಚಾರ ಏರ್ಪಡಿಸಿರುವ ಬಗ್ಗೆ ಗಮನಸೆಳೆದಾಗ, ತಮಗೆ ಆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ, ಸಿಕ್ಕ ಟ್ರಕ್ಗಳನ್ನು ಹತ್ತಿಕೊಂಡು ಊರಿಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.