ನ್ಯೂಸ್

ಸಾಲ ವಾಪಾಸು ಕೇಳಲು ಬಂದವಳನ್ನೇ ರೇಪ್​ ಮಾಡಿಬಿಟ್ಟ; ಸಾಲ ಕೇಳಿದರೆ ಹುಷಾರ್​!

ಕೋಲ್ಕತ: ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರ ಋಣ ಮರೆಯಬಾರದು ಎನ್ನುತ್ತಾರೆ. ಆದರೆ ಕೆಲವರಿಗೆ ಋಣ ನೆನಪಿರುವುದು ಬದಿಗಿರಲಿ, ಅವರ ನೆನಪೂ ಕೂಡ ಇರುವುದಿಲ್ಲ. ಇಲ್ಲೊಬ್ಬ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯ ಬಗ್ಗೆ ಗೌರವವಿರುವ ಬದಲು ಕಾಮ ಭಾವನೆ ಹುಟ್ಟಿದ್ದು, ಸಾಲ ಕೊಟ್ಟಾಕೆಯ ಮೇಲೇ ಅತ್ಯಾಚಾರವೆಸಗಿಬಿಟ್ಟಿದ್ದಾನೆ.

ಕೋಲ್ಕತದ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ (16)ಗೂ ಮತ್ತು ಆಬಿರ್​ ನಾಸ್ಕರ್​ ಅಲಿಯಾಸ್​ ನಾಂತುಗೆ ಕೆಲ ತಿಂಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಸ್ನೇಹ ಬೆಳೆದಿತ್ತು. ಒಂದೇ ಊರಿನವರಾದ ಹಿನ್ನೆಲೆಯಲ್ಲಿ ಇಬ್ಬರ ಸ್ನೇಹ ಹೆಚ್ಚು ಗಟ್ಟಿಯಾಗಿಯೇ ರೂಪುಗೊಂಡಿತ್ತು. ಇಬ್ಬರೂ ಫೋನ್​ ಕರೆಗಳನ್ನೂ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಯಾವುದೋ ಸಮಸ್ಯೆ ಇದೆ ಎಂದು ಹೇಳಿ ವಿದ್ಯಾರ್ಥಿನಿ ಬಳಿ 4 ಸಾವಿರ ರೂಪಾಯಿ ಸಾಲವನ್ನು ನಾಂತು ಪಡೆದಿದ್ದಾನೆ. ತಿಂಗಳುಗಳು ಉರುಳಿದರೂ ಸಾಲವನ್ನು ಮರುಪಾವತಿಸಿಲ್ಲ.

ಸಾಲ ತೀರಿಸು ಎಂದು ವಿದ್ಯಾರ್ಥಿನಿ ಒತ್ತಡ ಹಾಕಲಾರಂಭಿಸಿದ್ದಾಳೆ. ಕಳೆದ ಗುರುವಾರ ಸಾಲ ತೀರಿಸುವುದಾಗಿ ಹೇಳಿದ ನಾಂತು, ವಿದ್ಯಾರ್ಥಿನಿಗೆ ತನ್ನ ಮನೆಗೆ ಬರಲು ತಿಳಿಸಿದ್ದಾನೆ. ನೀನು ನನ್ನ ಮನೆಗೆ ಬಾ, ನಿನ್ನ ಹಣವನ್ನು ನಾನು ಕೊಡುತ್ತೇನೆ ಎಂದು ಹೇಳಿದ್ದಾನೆ. ನಂಬಿ ಬಂದ ವಿದ್ಯಾರ್ಥಿನಿಯ ಮೇಲೆ ಆತ ಅತ್ಯಾಚಾರ ಮಾಡಿದ್ದಾನೆ. ಇನ್ನೊಮ್ಮೆ ಸಾಲ ವಾಪಾಸು ಕೇಳಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ನೀಡಿದ್ದಾನೆ.

ಮನೆಗೆ ಬಂದ ವಿದ್ಯಾರ್ಥಿನಿ ತಂದೆ ತಾಯಿ ಬಳಿ ನಡೆದ ವಿಚಾರ ತಿಳಿಸಿದ್ದಾಳೆ. ಈ ವಿಚಾರವಾಗಿ ಪೋಷಕರು ಪೊಲೀಸ್​ ದೂರು ನೀಡಿದ್ದಾರೆ. ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಆತ ಈ ಹಿಂದೆ ಒಮ್ಮೆ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದು, ಆತನ ವಿರುದ್ಧ ದೂರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)