ನ್ಯೂಸ್

ಲವರ್​ ಜತೆ ಮದ್ವೆ ಆಗ್ಬೇಕು, 18 ವರ್ಷ ಆಗುವರೆಗೂ ನನ್ನನ್ನು ಬಾಲಮಂದಿರದಲ್ಲಿಡಿ... ಠಾಣೆ ಮೆಟ್ಟಿಲೇರಿದ ಪಿಯು ವಿದ್ಯಾರ್ಥಿನಿ

ಕೊಳ್ಳೇಗಾಲ: ನನ್ನನ್ನು ವಿವಾಹವಾಗಲು ಪ್ರಿಯಕರ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಆತನೊಂದಿಗೆ ಮದುವೆಯಾಗಲು ನನಗೆ 18 ವರ್ಷ ವಯಸ್ಸಾಗುವವರೆಗೆ ತನ್ನನ್ನು ಬಾಲ ಮಂದಿರದಲ್ಲಿ ಇರಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾಳೆ.

ತಾಯಿಯೊಂದಿಗೆ ಪೊಲೀಸ್​ ಠಾಣೆಗೆ ತೆರಳಿದ ವಿದ್ಯಾರ್ಥಿನಿ, ತನ್ನ ಪ್ರೇಮ ಕಥೆಯನ್ನು ಲಿಖಿತ ರೂಪದಲ್ಲಿ ತಿಳಿಸಿ ಪ್ರಿಯಕರ, ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಮಹೇಶ್​ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಗ್ರಾಮದಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಮಹೇಶ್​ ಅಲಿಯಾಸ್​ ಅಪ್ಪು ಎಂಬಾತನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು. ಈ ವಿಷಯ ಎರಡೂ ಮನೆಯವರಿಗೂ ತಿಳಿದಿತ್ತು.

ಈ ನಡುವೆ ಕೆಲವೊಮ್ಮೆ ವಿದ್ಯಾರ್ಥಿನಿಗೆ ಪಾಲಕರು ಪ್ರೀತಿ ಬಿಟ್ಟು ಸುಮ್ಮನಿರಲು ಸೂಚಿಸಿದರೂ ಕೇಳದೆ, ಪ್ರೀಯಕರನ ಮನೆಗೆ ತೆರಳಿ ನಿನ್ನ ಜತೆ ವಾಸಿಸುವುದಾಗಿ ಕೇಳಿಕೊಂಡಿದ್ದಾಳೆ. ಆದರೆ, ಪ್ರಿಯಕರನ ಪಾಲಕರು ನಿನಗೆ 18 ವರ್ಷ ಆಗಿಲ್ಲ. ಹಾಗಾಗಿ, ನೀನು ಇಲ್ಲಿಗೆ ಬರಬಾರದು ಎಂದು ಕಳುಹಿಸಿದ್ದಾರೆ. ಪ್ರಿಯಕರನೂ 18 ವರ್ಷ ಆಗುವವವರೆಗೆ ಆಕೆಯ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿ ನಂತರ ಆಕೆಯ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.

ಇತ್ತ ವಿದ್ಯಾರ್ಥಿನಿ ತನ್ನ ಪಾಲಕರೊಂದಿಗೆ ಇರಲು ಇಚ್ಛಿಸದೆ ಪ್ರಿಯಕರನ್ನೊಂದಿಗೆ ಮದುವೆಯಾಗಲು ನಿರ್ಧರಿಸಿ ದೂರು ನೀಡಿದ್ದಾಳೆ. ತನಗೆ 18 ವರ್ಷವಾಗದ ಹಿನ್ನೆಲೆಯಲ್ಲಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಬಾಲಮಂದಿರಲ್ಲಿ ಇರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಸಬ್​ ಇನ್ಸ್​ಪೆಕ್ಟರ್​ ಆರ್​.ಮಂಜುನಾಥ್​ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.