ನ್ಯೂಸ್

ಖರ್ಗೆ ಆಯ್ಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​ ನಾಯಕರ ಜಂಟಿ ಸುದ್ದಿಗೋಷ್ಠಿ: ಸೋನಿಯಾಗೆ ಅಭಿನಂದನೆ, ಬಿಜೆಪಿಗೆ ತರಾಟೆ

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೊಷ್ಠಿ ನಡೆಸಿ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್​ನ ಇತಿಹಾಸ ಈ ದೇಶದ ಇತಿಹಾಸ. ದೇಶಕ್ಕೆ ಪ್ರಜಾಪ್ರಭುತ್ವ ಕೊಟ್ಟಿದ್ದೇವೆ, ಪಕ್ಷದಲ್ಲಿ ಪ್ರಜಾಪ್ರಭುತ್ವ ಉಳಿಸಿಕೊಂಡಿದ್ದೇವೆ.24 ವರ್ಷದ ನಂತರ ಈ ಚುನಾವಣೆ ನಡೆದಿದೆ. ಸೋನಿಯಾ ಗಾಂಧಿ ಅವರಿಗೆ ನಾನು ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಬಹಳ ಕಷ್ಟದ ಸಂದರ್ಭದಲ್ಲಿ ಸೋನಿಯಾ ಅವರು ಪಕ್ಷದ ಅಧ್ಯಕ್ಷೆಯಾಗಿದ್ದರು. ದೇಶಕ್ಕೆ ದೊಡ್ಡ ಶಕ್ತಿ ಮತ್ತು ಬದಲಾವಣೆಯನ್ನು ಸೋನಿಯಾ ಕೊಟ್ಟಿದ್ದಾರೆ. ರಾಹುಲ್ ಕೂಡ ಕಡಿಮೆ ಸ್ಥಾನ ಬಂದಾಗ ಜವಾಬ್ದಾರಿ ವಹಿಸಿಕೊಂಡಿದ್ದರು. ಚುನಾವಣೆಯಲ್ಲಿ ಗಾಂಧಿ ಕುಟುಂಬ ಇರಬೇಕು ಅಂತ ಒತ್ತಾಯ ಮಾಡಿದ್ವಿ. ಆದರೆ ಗಾಂಧಿಯೇತರ ಕುಟುಂಬ ಸದಸ್ಯರಿಗೆ ಜವಾಬ್ದಾರಿ ಕೊಡಲು ಚುನಾವಣೆ ಮಾಡಿದ್ರು. ರಾಜ್ಯಕ್ಕೆ ದೊಡ್ಡ ಭಾಗ್ಯ ಸಿಕ್ಕಿದೆ. ಎಸ್​.ನಿಜಲಿಂಗಪ್ಪ ಅವರ ಬಳಿಕ ರಾಜ್ಯದಿಂದ ಖರ್ಗೆ ಅಧ್ಯಕ್ಷರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಚುನಾವಣೆಗೂ ಮೊದಲೇ ನಾನು ಮತ್ತು ಡಿ.ಕೆ.ಸುರೇಶ್ ಇಬ್ಬರೂ ಸೋನಿಯಾ ಅವರನ್ನ ಭೇಟಿ ಮಾಡಿ ನೀವೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂದು ‌ಒತ್ತಾಯ ಮಾಡಿದ್ವಿ. ಆದರೆ ಅವರು ಒಪ್ಪಲಿಲ್ಲ. ಎಸ್​.ನಿಜಲಿಂಗಪ್ಪ ಅವರ ಬಳಿಕ ರಾಜ್ಯದಿಂದ ಖರ್ಗೆ ಅಧ್ಯಕ್ಷರಾಗಿದ್ದಾರೆ. ಖರ್ಗೆ ಜತೆಗೆ ಶಶಿ ತರೂರ್ ಅವರನ್ನೂ ಅಭಿನಂದಿಸುವೆ. ತರೂರ್ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ನಿಷ್ಠೆ, ತ್ಯಾಗ, ಹೋರಾಟ ಇದ್ರೆ ಯಾವ ಸ್ಥಾನ ಬೇಕಾದರೂ ಸಿಗುತ್ತೆ. ಅದಕ್ಕೆ ಉದಾಹರಣೆ ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಎಂದು ಡಿಕೆಶಿ ಹೇಳಿದರು.

ಬಿಜೆಪಿಯವರು ಕಾಂಗ್ರೆಸ್​ ಅನ್ನು ಗಾಂಧಿ ಕುಟುಂಬ ಅಂತ ಟೀಕಿಸುತ್ತಿದ್ದರು. ಆದ್ರೆ ಬಿಜೆಪಿಯಲ್ಲಿ ಒಂದೇ ರಾಜ್ಯದವರು ತುಂಬಿಕೊಂಡಿದ್ದಾರೆ. ಇವತ್ತು ನನಗೆ ಬಹಳ ಸಂತೋಷವಾಗಿದೆ. ಖರ್ಗೆ ರಬ್ಬರ್ ಸ್ಟಾಂಪ್ ಆದ್ರೆ ನಡ್ಡಾ ಯಾರು? ಯಾರ ರಬ್ಬರ್ ಸ್ಟಾಂಪ್ ಅಂತ ಕರೆಯೋಣ? ಖರ್ಗೆ ಅವರಿಗೆ ಅವರದ್ದೇ ಆದ ಹಿರಿತನ ಇದೆ. ಗಾಂಧಿ ಕುಟುಂಬದ ಅನುಭವ ತಳ್ಳಿಹಾಕಲು ಆಗಲ್ಲ. ಕೆಲವು ಬಾರಿ ಖರ್ಗೆ ಅವರು ಗಾಂಧಿ ಕುಟುಂಬವನ್ನು ಭೇಟಿ ಮಾಡಬೇಕಾಗುತ್ತೆ. ಸಲಹೆ ಪಡೆಯಲು ಹೋದರೆ ತಪ್ಪೇನು? ಸಿಎಂ ಕೂಡ ಯಡಿಯೂರಪ್ಪ, ಎಸ್​.ಎಂ. ಕೃಷ್ಣ ಅವರ ಬಳಿಗೆ ಹೋಗಲ್ವಾ? ಇದಕ್ಕೆ ರಬ್ಬರ್ ಸ್ಟಾಂಪ್ ಅಂತ ಕರೆಯಲು ಆಗುತ್ತಾ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ರಾಮಲಿಂಗರೆಡ್ಡಿ, ಸಲೀಂ ಅಹ್ಮದ್, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದರು.