ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ: ಖರ್ಗೆಗೆ ಅಭಿನಂದನೆ ತಿಳಿಸಿದ ಶಶಿ ತರೂರ್​

Kharge
Published on

ದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಇವರ ಪ್ರತಿಸ್ಪರ್ಧಿ ಶಶಿ ತರೂರ್​ ಅವರು ಖರ್ಗೆಗೆ ಅಭಿನಂದನೆ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮೂಲಕ ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ ಹೊತ್ತ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಟ್ವೀಟ್​ ಮಾಡಿರುವ ಶಶಿ ತರೂರ್​, ನನ್ನನ್ನೂ ಬೆಂಬಲಿಸಿದ 1000ಕ್ಕೂ ಸಹೋದ್ಯೋಗಿಗಳಿಗೆ ಧನ್ಯವಾದ ಎಂದಿದ್ದಾರೆ. ಖುದ್ದಾಗಿ ಖರ್ಗೆ ಅವರನ್ನ ಭೇಟಿ ಮಾಡಿ ಅಭಿನಂದಿಸುವೆ ಎಂದೂ ತಿಳಿಸಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷೀಯ ಸ್ಥಾನಕ್ಕೆ ಅ.17ರಂದು ಚುನಾವಣೆ ನಡೆದಿತ್ತು. ಮತಾಧಿಕಾರ ಪಡೆದಿದ್ದ ಒಟ್ಟು 9100 ಮಂದಿ ಪೈಕಿ ಶೇ.96 ಪ್ರದೇಶ ಕಾಂಗ್ರೆಸ್​ ಮುಖಂಡರು ಮತದಾನ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್​ ನಡುವೆ ನಡೆದ ಹಣಾಹಣಿಯಲ್ಲಿ 6825 ಮತಗಳ ಅಂತರದಲ್ಲಿ ಖರ್ಗೆ ಗೆಲುವಿನ ನಗೆ ಬೀರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆಯುವ ಮೂಲಕ ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ, ಎದುರಾಳಿ ಅಭ್ಯರ್ಥಿ ಶಶಿ ತರೂರ್​ 1072 ಮತ ಪಡೆದು ಪರಾಭವಗೊಂಡರು. ಚಲಾಣೆಯಾದ ಮತಗಳ ಪೈಕಿ 400 ಮತಗಳು ತಿರಸ್ಕೃತಗೊಂಡಿವೆ.

ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆಯಾದವರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 2ನೇಯವರು. 1968ರಲ್ಲಿ ಮಾಜಿ ಸಿಎಂ ಎಸ್​.ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net