ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಯೋಜನೆಗೆ ತಾಲೂಕಿನ ಗುಂರ್ಗಿಲಹಳ್ಳಿಯಲ್ಲಿ ಶನಿವಾರ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಗುಂಗಿರ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ, ಎತ್ತಿನಗಾಡಿ ಮೂಲಕ ವೇದಿಕೆ ವರೆಗೂ ಆಗಮಿಸಿದರು. ಬಳಿಕ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗ್ರಾಮದ ಹನುಮಪ್ಪ ಹಾಗೂ ದೊಡ್ಡಪ್ಪಯ್ಯ ಅವರ ಮನೆ ಬಾಗಿಲಿಗೇ ತೆರಳಿ ಕಂದಾಯ ದಾಖಲೆ ಪತ್ರಗಳನ್ನ ವಿತರಿಸಿದರು. ಗ್ರಾಮದ ಅರಳಿಕಟ್ಟೆ ಮೇಲೆ ಕೂತು ಗ್ರಾಮಸ್ಥರ ಅಹವಾಲು ಆಲಿಸಿದರು.
'ಅಲೆದಾಟ ಬೇಕಿಲ್ಲ...ಇಂದು ನಾಳೆ ಎಂಬ ಸುತ್ತಾಟವಿಲ್ಲ...ಕಂದಾಯ ದಾಖಲೆಗಳು ಮನೆ ಬಾಗಿಲಿಗೆ' ಎಂಬ ಹೊಚ್ಚ ಹೊಸ ಯೋಜನೆಗೆ ಸಿಎಂ ಚಾಲನೆ ನೀಡುತ್ತಿದ್ದಂತೆ ಸಭಿಕರು ಚಪ್ಪಾಳೆಯ ಸುರಿಮಳೆಗೈದರು.
ಕಂದಾಯ ದಾಖಲೆಗಳಾದ ಪಹಣಿ, ಅಟ್ಲಾಸ್ ಹಾಗೂ ಜಾತಿ-ಆದಾಯ ಪ್ರಮಾಣಪತ್ರವನ್ನ ರಾಜ್ಯದ ಪ್ರತಿ ಕುಟುಂಬಕ್ಕೂ ಸರ್ಕಾರದ ವತಿಯಿಂದಲೇ ಉಚಿತವಾಗಿ ವಿತರಣೆ ಮಾಡುವ ಮೂಲಕ ಸರ್ಕಾರಿ ಕಚೇರಿಗಳಿಗೆ ಜನ ಸಾಮಾನ್ಯರ ಅಲೆದಾಟ ತಪ್ಪಿಸೋದು ಯೋಜನೆಯ ಉದ್ದೇಶ.
ಸಿಎಂಗೆ ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸಾಥ್ ನೀಡಿದರು. ಶಾಸಕ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪಿ.ಶಿವಶಂಕರ್, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ವಿ.ನಾಗರಾಜು ಉಪಸ್ಥಿತರಿದ್ದರು.