ಬಿವಿಎಸ್​ಸಿ ಮತ್ತು ಎಎಚ್ ಸ್ನಾತಕ ಪದವಿಯಲ್ಲಿ 16 ಚಿನ್ನದ ಪದಕ ಪಡೆದ ರಾಘವೇಶನ್ (ನಡುವೆ ನಿಂತವರು), 5 ಪದಕ ಪಡೆದ ಸಚಿನ್ ಹುದ್ದಾರ್ ಹಾಗೂ 4 ಪದಕ ಸ್ವೀಕರಿಸಿದ ಎ.ಎನ್.ವಸುಧಾ. 
ನ್ಯೂಸ್

ಅನ್ನದಾತರ ಮಕ್ಕಳ ಕೊರಳಿಗೆ ಬಂಗಾರದ ಮಾಲೆ!: ಬೀದರ್​ ಪಶು ವಿವಿ 13ನೇ ಘಟಿಕೋತ್ಸವ; ರಾಘವೇಶ್​ಗೆ 16, ಸಚಿನ್​ಗೆ 5 ಚಿನ್ನದ ಪದಕ

ಬೀದರ್: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವದಲ್ಲಿ ಮಂಡ್ಯ ಮೂಲದ ವಿದ್ಯಾರ್ಥಿ ರಾಘವೇಶ್ ಎ.ಎನ್. 16 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅವಸರದಳ್ಳಿ ನಿವಾಸಿಯಾದ ರಾಘವೇಶ್, ಗದಗ ಪಶು ವೈದ್ಯಕೀಯ ಕಾಲೇಜಿನಲ್ಲಿ ಬಿವಿಎಸ್​ಸಿ ಮತ್ತು ಎಎಚ್ ಸ್ನಾತಕ ಪದವಿಯಲ್ಲಿ 2021-22ರಲ್ಲಿ 16 ಚಿನ್ನದ ಪದಕ ಬಾಚಿ ದಾಖಲೆ ಬರೆದಿದ್ದಾರೆ. ರಾಘವೇಶ್ ತಂದೆ ನಾಗರಾಜು ಕೃಷಿಕರು. ಬೀದರ್​ನ ಪಶುವೈದ್ಯಕೀಯ ಕಾಲೇಜಿನ ಸಚಿನ್ ಹುದ್ದಾರ್ ಬಿವಿಎಸ್​ಸಿ ಮತ್ತು ಎಎಚ್ ಸ್ನಾತಕ ಪದವಿಯಲ್ಲಿ 2021-22ರಲ್ಲಿ 5 ಚಿನ್ನದ ಪದಕ ಗಳಿಸುವ ಮೂಲಕ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಸಚಿನ್ ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ನಿವಾಸಿ. ಇವರ ತಂದೆ ದುಂಡಪ್ಪ ಕೂಡ ರೈತರು.

ಬಿವಿಎಸ್​ಸಿ ಮತ್ತು ಎಎಚ್​ನಲ್ಲಿ ಬೆಂಗಳೂರು ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ವಸುಧಾ ಎ.ಎನ್. ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆ ವಸುಧಾ ತಂದೆ ನಾಗರಾಜ ಇಂಜಿನಿಯರ್. ತಾಯಿ ವಾಣಿ ಗೃಹಿಣಿ. ಎಂವಿಎಸ್​ಸಿ ಮಾಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಹೈನು ವಿಜ್ಞಾನ ಕಾಲೇಜಿನ ಸುರೇಶಬಾಬು ಬಿ.ಟೆಕ್ (ಹೈನು ತಂತ್ರಜ್ಞಾನ) ವಿಭಾಗದಲ್ಲಿ ನಾಲ್ಕು ಪದಕ ಪಡೆದರು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ನಿವಾಸಿಯಾದ ಸುರೇಶಬಾಬು ತಂದೆ ಶ್ರೀನಿವಾಸ ಬಿಎಂಟಿಸಿಯಲ್ಲಿ ಕಂಡಕ್ಟರ್. ಘಟಿಕೋತ್ಸವದಲ್ಲಿ 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 445 ಸ್ನಾತಕ, 333 ಸ್ನಾತಕೋತ್ತರ ಹಾಗೂ 59 ಡಾಕ್ಟರೇಟ್ ಸೇರಿವೆ.

ಸಾಧಕರಿಗೆ ಗೌರವ ಡಾಕ್ಟರೇಟ್

ಮೈಸೂರು: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2019-20 ಮತ್ತು 2020-21ನೇ ಸಾಲಿನ ಘಟಿಕೋತ್ಸವ ಸಮಾರಂಭ ಅ.18ರ ಸಂಜೆ 4 ಗಂಟೆಗೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆಯಲಿದ್ದು, 6 ಸಾಧಕರಿಗೆ ಗೌರವ ಡಾಕ್ಟರೇಟ್, 6 ಜನರಿಗೆ ಡಿಲೀಟ್, 83 ಜನರಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಕರ್ನಾಟಕ ಸಂಗೀತ ವಿದುಷಿ ಡಿ.ಶಶಿಕಲಾ, ಹಿಂದುಸ್ತಾನಿ ಸಂಗೀತ ಗಾಯಕ ಪಂಡಿತ್ ವಿನಾಯಕ ತೊರವಿ, ಸಂಗೀತ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಮಧುಸೂದನ್ ಸಾಯಿ ಅವರಿಗೆ 2019-20ನೇ ಸಾಲಿನ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ಸಂಗೀತ ಸಂಶೋಧನೆಯಲ್ಲಿ ತೊಡಗಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಹಿಂದುಸ್ತಾನಿ ಸಂಗೀತ ಕ್ಷೇತ್ರದ ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿ, ಕರ್ನಾಟಕ ಸಂಗೀತ ಕ್ಷೇತ್ರದ ಪ್ರೊ.ಎಸ್.ಸಿ.ಶರ್ಮ ಅವರಿಗೆ 2020-21ನೇ ಸಾಲಿನ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತಿದೆ.

ದೇವೇಗೌಡ, ಸೋಮನಾಥ್​ಗೆ ಗೌ. ಡಾಕ್ಟರೇಟ್ ಇಂದು ಪ್ರದಾನ

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಮಂಗಳವಾರ (ಅ. 17) ಬೆಳಗ್ಗೆ 10.30ಕ್ಕೆ ಸೆಂಟಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ.

ಜಾವಗಲ್ ಸೇರಿ ಮೂವರಿಗೆ ಗೌಡಾ

ಮೈಸೂರು ವಿಶ್ವವಿದ್ಯಾಲಯದ 103ನೇ ಘಟಿಕೋತ್ಸವ ಅ.18ರಂದು ಆಯೋಜಿಸಲಾಗಿದ್ದು, 32,240 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಬಾರಿ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವಿಶ್ರಾಂತ ಪ್ರಾಧ್ಯಾಪಕ ನಾಡೋಜ ಡಾ.ಪಿ.ಎಸ್.ಶಂಕರ್ ಗೌರವ ಡಾಕ್ಟರೇಟ್​ಗೆ ಭಾಜನರಾಗಿದ್ದಾರೆ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.