ನ್ಯೂಸ್

ಪುಕ್ಕಟೆ ಮದ್ಯ-ಊಟ ಸಿಕ್ಕ ಖುಷಿಯಲ್ಲಿ ಮನೆಗೆ ಬಂದವನಿಗೆ ಕಾದಿತ್ತು ಶಾಕ್​! ಕುಡಿಸಿ, ತಿನ್ನಿಸಿ ಹೀಗಾ ಮಾಡೋದು?

ಶಿವಮೊಗ್ಗ: ಬಿಟ್ಟಿಯಾಗಿ ಮದ್ಯ ಸಿಗುತ್ತದೆ ಎಂದು ಅಪರಿಚಿತರು ಕರೆದಾಕ್ಷಣ ಹೋದರೆ ಜೋಕೆ! ಮದ್ಯದ ಆಮಿಷವೊಡ್ಡಿ ಪುಸಲಾಯಿಸುವ ಗ್ಯಾಂಗ್​, ಕುಡಿಯಲು ಬಂದ ವ್ಯಕ್ತಿಗೇ ಗೊತ್ತಾಗದಂತೆ ಜೇಬಲ್ಲಿದ್ದ ಹಣ, ಮೈಮೇಲಿನ ಆಭರಣವನ್ನೇ ಎಗರಿಸಿಬಿಡ್ತಾರೆ...

ಹೌದು, ಇಂತಹದ್ದೇ ಒಂದು ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಬೆಳಗಿನ ಜಾವ ಟೀ ಕುಡಿದು ಸಿಗರೇಟ್ ಖರೀದಿ ಮಾಡಲು ತೆರೆಳಿದ್ದ ಪ್ರಿಯದರ್ಶಿನಿ ಲೇಔಟ್‌ನ ಯುವಕನನ್ನು ಪರಿಚಯ ಮಾಡಿಕೊಂಡ ಮೂವರು ಸಮೀಪದ ತೋಟಕ್ಕೆ ಹೋಗಿ ಮದ್ಯ ಸೇವಿಸಿ ಊಟ ಮಾಡುವುದಕ್ಕೆ ಒಪ್ಪಿಸಿದ್ದಾರೆ. ಬಳಿಕ ನಾಲ್ವರೂ ಪುರಲೆ ಸುಬ್ಯಯ್ಯ ಆಸ್ಪತ್ರೆ ಎದುರಿನ ತೋಟವೊಂದಕ್ಕೆ ಹೋಗಿ ಮದ್ಯ ಸೇವಿಸಿ ಅಲ್ಲಿಯೇ ಊಟವನ್ನೂ ಮಾಡಿದ್ದಾರೆ.

ಉಂಡು, ಕುಡಿದು ತೇಗುತ್ತಾ ಮನೆಗೆ ಬಂದ ಯುವಕನಿಗೆ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈತನ ಕೊರಳಲ್ಲಿದ್ದ 93,500 ರೂ. ಮೌಲ್ಯದ 18 ಗ್ರಾಂ ಚಿನ್ನದ ಸರ ಮಾಯವಾಗಿತ್ತು. ಅಪರಿಚಿತರು ಮದ್ಯ ಕುಡಿಸಿ ಗಮನ ಬೇರೆಡೆ ಸೆಳೆದು ಬಂಗಾರದ ಸರವನ್ನು ಎಗರಿಸಿದ್ದಾರೆ. ಈ ಘಟನೆ ಮೇ 8ರಂದು ನಡೆದಿದೆ. ಆರೋಪಿಗಳಿಗಾಗಿ ಹುಡುಕಿ ಹುಡಕಿ ಸುಸ್ತಾದ ಯುವಕ ಇದದೀಗ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.