ಮುಂಬೈ: ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಪ್ರಣಾಳಿಕೆಗಳ ಬಿಡುಗಡೆ ಯಿಂದ ಚುನಾವಣೆಯ ಕಾವು ತೀವ್ರಗೊಂಡಿದೆ.
ಆಡಳಿತದಲ್ಲಿರುವ ಪ್ರಮುಖ ಪಕ್ಷವಾದ ಬಿಜೆಪಿ ನೇತೃತ್ವದ ಮಹಾಯುತಿಯು ‘ಸಂಕಲ್ಪ ಪತ್ರ’ದ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಿದ್ದರೆ, ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ವಿಪಕ್ಷಗಳ ಕೂಟ ‘ಮಹಾ ವಿಕಾಸ ಅಘಾಡಿ’ ತನ್ನ ಪ್ರಣಾಳಿಕೆಯಲ್ಲಿ ‘ಗ್ಯಾರಂಟಿ’ಗಳ ಭರವಸೆ ನೀಡಿದೆ.
ಆಡಳಿತ ಹಾಗೂ ವಿರೋಧ ಪಕ್ಷಗಳು ಮಹಾರಾಷ್ಟ್ರದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿವೆ. ಇದರೊಂದಿಗೆ ಬಿಜೆಪಿ ಪ್ರಮುಖವಾಗಿ ಮತ ಆಧಾರಿತ ಕಾನೂನು ಜಾರಿಯ ದಾಳ ಉರುಳಿಸಿದ್ದರೆ, ಕಾಂಗ್ರೆಸ್ ಮತ್ತದೇ ಗ್ಯಾರಂಟಿ ಹಾಗೂ ಜಾತಿಗಣತಿಯ ಮೊರೆ ಹೋಗಿದೆ. ಮಹಾಯುತಿಯು ಬಿಜೆಪಿ, ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆ ಹಾಗೂ ಡಿಸಿಎಂ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಪಕ್ಷಗಳನ್ನು ಒಳಗೊಂಡಿದೆ. ಮಹಾ ವಿಕಾಸ ಅಘಾಡಿಯು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಹಾಗೂ ಶಿವಸೇನೆ (ಯುಬಿಟಿ) ಪಕ್ಷಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದ್ದು, ನ. 23ರಂದು ಮತ ಎಣಿಕೆ ನಡೆಯಲಿದೆ.
ಮಹಾಯುತಿ ಭರವಸೆಯಲ್ಲಿ ನಂಬಿಕೆ: ಮಹಾಯುತಿ ಸರ್ಕಾರ ರೈತರು, ಬಡವರು ಮತ್ತು ಮಹಿಳೆಯರ ಘನತೆಗಾಗಿ ಕೆಲಸ ಮಾಡುತ್ತಿದೆ. ಪ್ರಣಾಳಿಕೆಯಲ್ಲಿನ ಅಂಶಗಳು ಮಹಾರಾಷ್ಟ್ರದ ಜನರ ಆಕಾಂಕ್ಷೆಗಳೇ ಆಗಿವೆ. ಕರ್ನಾಟಕ, ಹಿಮಾಚಲಪ್ರದೇಶ, ತೆಲಂಗಾಣಗಳಲ್ಲಿ ಕಾಂಗ್ರೆಸ್ನವರು ತಮ್ಮ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ಎಲ್ಲರೂ ಮಹಾಯುತಿಯ ಭರವಸೆಗಳಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.
ಸಂಕಲ್ಪ ಪತ್ರ: ಬಿಜೆಪಿಯ ‘ಸಂಕಲ್ಪ ಪತ್ರ-2024’ ಹೆಸರಿನ 25 ಅಂಶಗಳ ಪ್ರಣಾಳಿಕೆಯನ್ನು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಂಬೈನಲ್ಲಿ ಬಿಡುಗಡೆ ಮಾಡಿದರು. ಮತಾಂತರ ವಿರೋಧಿ ಕಾನೂನು ಜಾರಿ, ಉದ್ಯಮದ ಅಗತ್ಯಕ್ಕೆ ಅನುಗುಣವಾದ ತರಬೇತಿಗಾಗಿ ಕೌಶಲ್ಯ ಗಣತಿ ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಉಚಿತ ಪಡಿತರ ಯೋಜನೆ ಈ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಕಗಳಾಗಿವೆ.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು
ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟವು ಮುಂಬೈ ಚುನಾವಣೆಯಲ್ಲೂ ಗ್ಯಾರಂಟಿ ಮೊರೆ ಹೋಗಿದ್ದು, ಪ್ರಣಾಳಿಕೆಯಲ್ಲಿ ಈ ಹಿಂದಿನ ಕೆಲವು ಚುನಾವಣೆಗಳಲ್ಲಿ ಬಳಸಿದ್ದ ತಂತ್ರವನ್ನೇ ಅನುಸರಿಸಿದೆ.
‘ಮಹಾರಾಷ್ಟ್ರ ನಾಮ’ ಎಂಬ ಶೀರ್ಷಿಕೆಯ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್, ಎನ್ಸಿಪಿ(ಎಸ್ಪಿ) ಸಂಸದೆ ಸುಪ್ರಿಯಾ ಸುಲೆ ಮುಂತಾದವರು ಜೊತೆಯಾಗಿ ಭಾನುವಾರ ಮುಂಬೈನಲ್ಲಿ ಬಿಡುಗಡೆ ಮಾಡಿದರು. ಜಾತಿ ಆಧರಿತ ಗಣತಿ, ಮಹಾಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 3,000 ರೂ., ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಮಾಡಿರುವವರಿಗೆ ಮಾಸಿಕ 4 ಸಾವಿರ ರೂ. ಭತ್ಯೆ ಮುಂತಾದ ಗ್ಯಾರಂಟಿಗಳನ್ನು ಘೋಷಿಸಿದೆ.
ಬದ್ಧತೆ ಇದ್ದರೆ ದಾರಿ ಇದ್ದೇ ಇದೆ..: ‘ನೀವು ನಮಗೆ ಸರ್ಕಾರ ಕೊಡಿ, ನಾವು ನಿಮಗೆ ಬಜೆಟ್ ನೀಡುತ್ತೇವೆ’ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆಂದೇ ಬಜೆಟ್ನಲ್ಲಿ 52 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ನಾವು ಸುಳ್ಳು ಹೇಳಿಲ್ಲ, ಬಡವರಿಗೆ ಸಹಾಯ ಮಾಡಬೇಕು ಎಂಬ ಬದ್ಧತೆ ಇದ್ದರೆ ದಾರಿ ಇದ್ದೇ ಇರುತ್ತದೆ ಎಂದು ಅವರು ಹೇಳಿದರು. ಕೆಲವು ಜನಪ್ರಿಯ ಯೋಜನೆಗಳು ಮತದಾರರ ಮೇಲೆ ಪ್ರಭಾವ ಬೀರಲಿಕ್ಕಲ್ಲ, ಅವು ಸಾಮಾಜಿಕ ಭದ್ರತೆ ಒದಗಿಸುವ ಸಿದ್ಧಾಂತಕ್ಕೆ ಪೂರಕ ಎಂದು ಖರ್ಗೆ ಪ್ರಶ್ನೆಯೊಂದಕ್ಕೆ ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು
ಬಿಜೆಪಿ ಮತ್ತು ಅದರ ಮೈತ್ರಿಪಕ್ಷಗಳು ರಾಜ್ಯಕ್ಕೆ ಕಳೆದ ಹತ್ತು ವರ್ಷಗಳಿಂದ ದ್ರೋಹ ಬಗೆದಿವೆ. ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಹೇಳುತ್ತಿದ್ದಾರೆ. ಆದರೆ, ಅವರು ಅಧಿಕಾರದಲ್ಲಿದ್ದಾಗ ಏಕೆ ಅದನ್ನು ಮಾಡಿರಲಿಲ್ಲ?
| ನಾನಾ ಪಟೋಲೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ