ನ್ಯೂಸ್

ಹಿರಿಯರು ಬಯಸಿದ್ರೆ ರಾಜ್ಯ ರಾಜಕೀಯ ಪ್ರವೇಶಿಸುವೆ: ಸಂಸದ ಬಿ.ವೈ.ರಾಘವೇಂದ್ರ

ಶಿರಸಿ: ಪಕ್ಷದ ಹಿರಿಯರು ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡವರು ಬಯಸಿದರೆ ರಾಜ್ಯ ರಾಜಕೀಯ ಪ್ರವೇಶಿಸುವುದಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಸೋಮವಾರ ಶಿರಸಿಗೆ ಆಗಮಿಸಿದ ವೇಳೆ ಮುಂಬರುವ ವಿಧಾನಸಭೆ ಚುನಾವಣೆಗೆ ಶಿಕಾರಿಪುರದಿಂದ ಟಿಕೆಟ್ ಕೇಳುತ್ತೀರಾ ಎಂದು ಪತ್ರಕರ್ತರ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ, ಹಿರಿಯರು ಬಯಸಿದರೆ ರಾಜ್ಯ ರಾಜಕೀಯ ಬರುವೆ ಎಂದರು.

ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾ ದಳಗಳ ಸಹಜ ಪ್ರಕ್ರಿಯೆ. ಯಡಿಯೂರಪ್ಪ ಅವರ ಕಚೇರಿಯಲ್ಲಿ ಉಮೇಶ ಎಂಬುವವರು ಹಲವು ವರ್ಷ ಕೆಲಸ ಮಾಡಿದ್ದು ನಿಜ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರಾಘವೇಂದ್ರ ಹೇಳಿದರು.

ಯಡಿಯೂರಪ್ಪ ಅವರನ್ನು ಸಂಘಟನೆ ಬೆಳೆಸಿದೆ. ಅವರಿಂದ ಸಂಘಟನೆಗೂ ಸಾಕಷ್ಟು ಅಪೇಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅವರು ಉಪ ಚುನಾವಣೆಗಳಲ್ಲಿ ಗೆಲ್ಲಲು ಅಗತ್ಯ ಸಂಘಟನೆಯನ್ನೂ ಮಾಡಲಿದ್ದಾರೆ. ನಮ್ಮನ್ನು ಬೆಳೆಸಿದ ತಾಯಿ ಬಿಜೆಪಿ ಪಕ್ಷ. ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತುಕೊಂಡು ಮಾತನಾಡುತ್ತೇವೆ ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷ. ಎಲ್ಲ ರೀತಿ ಯೋಚನೆ ಮಾಡಿಕೊಂಡು ಯುದ್ಧಕ್ಕೆ ಸಿದ್ಧರಾಗಬೇಕಾಗುತ್ತದೆ. ಅದಕ್ಕೆ ತನ್ನದೇ ಆದ ತಂತ್ರಗಾರಿಕೆ ಇರುತ್ತದೆ. ಅದರಿಂದ ಒಂದು ದಿನ ವಿಳಂಬವಾಗಿ ವಿಜಯೇಂದ್ರ ಅವರಿಗೆ ಉಪ ಚುನಾವಣೆ ಹೊಣೆಗಾರಿಕೆ ಸಿಕ್ಕಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.