ನ್ಯೂಸ್

ಪಂಜಾಬ್​ ವಿಧಾನಸಭೆ ಚುನಾವಣೆ: ಫೆ.20ಕ್ಕೆ ಮತದಾನ ಮುಂದೂಡಿಕೆ

ನವದೆಹಲಿ: ಫೆಬ್ರವರಿ 14ರಂದು ನಡೆಯಬೇಕಿದ್ದ ಪಂಜಾಬ್​ ವಿಧಾನಸಭೆ ಚುನಾವಣೆ ಮತದಾನವನ್ನು ಕೇಂದ್ರ ಚುನಾವಣಾ ಆಯೋಗ 6 ದಿನ ಮುಂದೂಡಿದೆ. 117 ಕ್ಷೇತ್ರಗಳಿಗೂ ಫೆ.14ರ ಬದಲು ಒಂದೇ ಹಂತದಲ್ಲಿ ಫೆ.20ರಂದು ಮತದಾನ ನಡೆಯಲಿದೆ.

ಫೆ.16ಕ್ಕೆ ಗುರು ರವಿದಾಸ್​ ಜಯಂತಿ ಇದೆ. ಪಂಜಾಬ್​ ಜನಸಂಖ್ಯೆಯ ಶೇ.32ರಷ್ಟಿರುವ ಪರಿಶಿಷ್ಟ ಜಾತಿ ಸಮುದಾಯದವರು ಸೇರಿದಂತೆ ರಾಜಯದ ಬಹುತೇಕರು ಗುರು ರವಿದಾಸ್​ ಅವರ ಅನುಯಾಯಿಗಳು. ಹಾಗಾಗಿ ಅವರ ಜನ್ಮದಿನದ ಹಿನ್ನೆಲೆ ಪಂಜಾಬ್​ನಿಂದ ಲಕ್ಷಾಂತರ ಮಂದಿ ಉತ್ತರ ಪ್ರದೇಶದ ಬನಾರಸ್​ಗೆ ತೆರಳಿ ಗುರು ಜಯಂತಿ ಆಚರಿಸುತ್ತಾರೆ. ಪರಿಣಾಮ ಬಹುತೇಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಹಾಗಾಗಿ ಚುನಾವಣೆಯನ್ನ ಮುಂದೂಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ(ಸಂಯುಕ್ತ), ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಹಾಗೂ ಬಿಎಸ್​ಪಿ ಮನವಿ ಮಾಡಿತ್ತು. ಇದೀಗ ಈ ಮನವಿಯನ್ನು ಪರಿಗಣಿಸಿರುವ ಚುನಾವಣಾ ಆಯೋಗ, ಮತದಾನದ ದಿನಾಂಕ ಬದಲಿಸಿ ಆದೇಶ ಹೊರಡಿಸಿದೆ.