ಸ್ನಾನ ಮಾಡುವಾಗ ಗೀಸರ್​ಗೆ ತಾಯಿ-ಮಗಳು ಬಲಿ! ಪದೇಪದೆ ಸಂಭವಿಸುತ್ತಿದೆ ದುರಂತ, ಅಪಾಯದಿಂದ ಪಾರಾಗಲು ಇಲ್ಲಿವೆ ಉಪಯುಕ್ತ ಮಾಹಿತಿ

death
Published on

ಬೆಂಗಳೂರು: ಸೋಲದೇವನಹಳ್ಳಿಯ ಗಣಪತಿನಗರದಲ್ಲಿ ಮಗಳಿಗೆ ಸ್ನಾನ ಮಾಡಿಸುವಾಗಲೇ ತಾಯಿ-ಮಗಳಿ ಇಬ್ಬರೂ ಗ್ಯಾಸ್​ ಗೀಸರ್​ಗೆ ಬಲಿಯಾಗಿದ್ದಾರೆ.

ಮಂಗಳಾ (35) ಮತ್ತು ಇವರ ಪುತ್ರಿ ಗೌತಮಿ (7) ಮೃತ ದುರ್ದೈವಿಗಳು. ಶನಿವಾರ ಬೆಳಗ್ಗೆ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಪತ್ನಿ ಮಂಗಳಾ, ಮಗಳು ಗೌತಮಿಗೆ ಸ್ನಾನ ಮಾಡಿಸಲೆಂದು ಸ್ನಾನದ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಬಿಸಿ ನೀರಿಗಾಗಿ ಆನ್​ ಮಾಡಿದ್ದ ಗ್ಯಾಸ್​ ಗೀಸರ್​ನಿಂದ ಕಾರ್ಬನ್​ ಮೋನಾಕ್ಸೈಡ್​ ಅನಿಲ ಸೋರಿಕೆಯಾಗಿತ್ತು. ಅದರಿಂದ ಉಸಿರುಗಟ್ಟಿ ತಾಯಿ-ಮಗಳು ಇಬ್ಬರೂ ಸ್ನಾನ ಗೃಹದಲ್ಲೇ ಸಾವಿಗೀಡಾಗಿದ್ದಾರೆ. ಅಂದಹಾಗೆ ಏನಿದು ಕಾರ್ಬನ್​ ಮೋನಾಕ್ಸೈಡ್​? ಈ ಅಪಾಯದಿಂದ ಪಾರಾಗಲು ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಏನು? ಎಂಬುದರ ಮಾಹಿತಿ ಇಲ್ಲಿದೆ.

ಪತಿ ನರಸಿಂಹಮೂರ್ತಿ ಮಧ್ಯಾಹ್ನದ ಬಳಿಕ ಮಂಗಳಾ ಮೊಬೈಲ್​ಗೆ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡು ಮನೆ ಮಾಲೀಕರಿಗೆ ಕರೆ ಮಾಡಿ "ನಮ್ಮ ಮನೆ ಬಳಿ ಹೋಗಿ ಪತ್ನಿ-ಮಗಳನ್ನು ನೋಡಿಕೊಂಡು ಬನ್ನಿ' ಎಂದು ಹೇಳಿದ್ದರು. ಮನೆ ಮಾಲೀಕರು ಬಂದು ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಗಾಬರಿಗೊಂಡು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ತಾಯಿ-ಮಗಳು ಸ್ನಾನದ ಕೋಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು.

ಮನೆ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮಂಗಳ ಮತ್ತು ಗೌತಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಬನ್​ ಮೋನಾಕ್ಸೈಡ್​ ಅನಿಲ ಸೇವಿಸಿ ತಾಯಿ-ಮಗಳು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಸ್ನಾನದ ಕೋಣೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿದ ಹಿನ್ನೆಲೆಯಲ್ಲಿ ಸರಿಯಾಗಿ ಗಾಳಿಯಾಡುತ್ತಿರಲಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಮಾಗಡಿ ಮೂಲದ ನರಸಿಂಹಮೂರ್ತಿ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಬಾರ್​ ಬೆಂಡಿಂಗ್​ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ಏನಿದು ಕಾರ್ಬನ್​ ಮೋನಾಕ್ಸೈಡ್​?: ಗ್ಯಾಸ್​ ಗೀಸರ್​ಗೆ ಎಲ್​ಪಿಜಿ ಇಂಧನವಾಗಿ ಬಳಕೆಯಾಗುತ್ತದೆ. ಇದು ಗಾಳಿ ಹೆಚ್ಚಾಗಿರುವ ಕಡೆ ಉರಿದು ಕಾರ್ಬನ್​ ಡೈ ಆಕ್ಸೈಡ್​ ಆಗುತ್ತದೆ. ಹೊರಗಿನ ಗಾಳಿ ಒಳಗೆ ಬಾರದಿದ್ದಾಗ, ಗೀಸರ್​ನಲ್ಲಿ ಉರಿಯುತ್ತಿರುವ ಗಾಳಿ ಹೊರಗೆ ಹೋಗದಿದ್ದಾಗ ಅಲ್ಲಿರುವ ಗಾಳಿ ವಿಷವಾಗಿ ಮಾರ್ಪಾಡಾಗಿ ಕಾರ್ಬನ್​ ಮೋನಾಕ್ಸೈಡ್​ ಆಗಿ ಮಾರ್ಪಾಡಾಗುತ್ತದೆ. ಇದು ಸೋರಿಕೆಯಾಗಿ ಇದನ್ನು ಸೇವಿಸಿದರೆ ಮೂರ್ಛೆತಪ್ಪಿ ಬಿದ್ದು ಮೃತಪಡುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಆಯಾಸ, ತಲೆನೋವು, ತಲೆಸುತ್ತು, ಗಲಿಬಿಲಿ, ಪಿಟ್ಸ್​ ಬರುವ ಸಾಧ್ಯತೆಗಳಿವೆ.

ಮುನ್ನೆಚ್ಚರಿಕಾ ಕ್ರಮಗಳು?

* ಸೀಲಿಂಗ್​ನ 2 ಅಡಿ ಕೆಳಗಡೆ ಗ್ಯಾಸ್​ ಗೀಸರ್​ ಯಂತ್ರ ಅಳವಡಿಸಿಕೊಳ್ಳಿ

* ಸ್ನಾನದ ಕೋಣೆಯಲ್ಲಿರುವ ಕಿಟಕಿಯ ಬಳಿ ಗ್ಯಾಸ್​ ಗೀಸರ್​ ಅಳವಡಿಸಿ

* ಎಕ್ಸಿಸ್ಟ್​ ಫ್ಯಾನ್​ ಇದ್ದರೆ ಗೀಸರ್​ ಆನ್​ ಮಾಡಿದಾಗ ಆ ಫ್ಯಾನ್​ ಆನ್​ ಮಾಡಿ

* ಸ್ನಾನದ ಕೋಣೆಯಲ್ಲಿ ಸರಿಯಾಗಿ ಗಾಳಿಯಾಡದಿದ್ದರೆ ಗೀಸರ್​ ಯಂತ್ರವನ್ನು ಹೊರಗೆ ಅಳವಡಿಸಬಹುದು.

*20 ನಿಮಿಷಕ್ಕಿಂತ ಅಧಿಕ ಕಾಲ ನಿರಂತರವಾಗಿ ಗೀಸರ್​ ಆನ್​ ಮಾಡಬಾರದು.

*ಗ್ಯಾಸ್​ ಗೀಸರ್​ ಬಳಸುವ ಕೋಣೆಯಲ್ಲಿ ಗಾಳಿಯಾಡುವ ವಿಶಾಲವಾದ ಕಿಟಕಿ ಇರಬೇಕು.

* ಕಿಟಕಿ ಮುಚ್ಚಲೇಬೇಕು ಎಂದಿದ್ದರೆ ಮೊದಲೇ ಗೀಸರ್​ನಿಂದ ಬಿಸಿ ನೀರನ್ನು ಬಕೆಟ್​ಗೆ ಹಾಕಿ ನಂತರ ಅದನ್ನು ಆಫ್​​ ಮಾಡಿ ಸ್ನಾನ ಮಾಡಿದರೆ ಉತ್ತಮ.

ಹಳೇ ದುರಂತಗಳು

* 2018 ಜುಲೈನಲ್ಲಿ ರಾಜರಾಜೇಶ್ವರಿನಗರದಲ್ಲಿ ಸ್ನಾನ ಮಾಡುತ್ತಿದ್ದಾಗ ಇಂಜಿನಿಯರ್​ ದಂಪತಿಗಳಾದ ಮಹೇಶ್​(35), ಶೀಲಾ(30) ಕಾರ್ಬನ್​ ಮೋನಾಕ್ಸೈಡ್​ ಸೇವಿಸಿ ಮೃತಪಟ್ಟಿದ್ದರು.

* 2019 ಜನವರಿಯಲ್ಲಿ ಕಾರ್ಬನ್​ ಮೋನೈಕ್ಸೈಡ್​ ಸೇವಿಸಿ ಕೆಜಿನಗರ ಲಕ್ಷ್ಮೀಪುರ ನಿವಾಸಿಗಳಾದ ಅರ್ಪಿತಾ (23), ತನ್ನ 3 ವರ್ಷದ ಮಗುವಿನೊಂದಿಗೆ ಪ್ರಾಣ ಬಿಟ್ಟಿದ್ದರು.

* ಸೆ.8ರಂದು ಮಹಾಲಕ್ಷ್ಮೀ ಲೇಔಟ್​ನಲ್ಲಿ ಸ್ನಾನ ಮಾಡುತ್ತಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ದೇಹದೊಳಗೆ ಕಾರ್ಬನ್​ ಮೋನೈಕ್ಸೈಡ್​ ಹೋಗಿ ಮೃತಪಟ್ಟಿದ್ದರು.

* 2021ರ ಫೆ.14ರಂದು ಹೊಸಕೆರೆ ಹಳ್ಳಿಯಲ್ಲಿ ಎಂ.ಟೆಕ್​ ವಿದ್ಯಾರ್ಥಿ ರಜತ್​ (22), ಆತನ ಪ್ರೇಯಸಿ 22 ವರ್ಷದ ಟೆಕ್ಕಿ ಸ್ನಾನ ಮಾಡುತ್ತಿದ್ದಾಗ ಕಾರ್ಬನ್​ ಮೋನಾಕ್ಸೈಡ್​ ಸೇವಿಸಿ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net