ಡಿಯಾಗೋ ಮಾರ್ಟಿನ್: ಮದುವೆ ಮನೆಗಳಿಗೆ ಹೋದಾಗ ಚಂದದ ಯುವತಿಯರು ಹೂ ಕೊಟ್ಟು, ಸುಗಂದ ದ್ರವ್ಯ ಸಿಂಪಡಿಸಿ ನಿಮ್ಮನ್ನ ಸ್ವಾಗತಿಸಿಕೊಳ್ಳುತ್ತಾರೆ. ಅದೇ ಶವಸಂಸ್ಕಾರಕ್ಕೆ ಹೋದಾಗ? ಶವಸಂಸ್ಕಾರಕ್ಕೆ ಹೋದಾಗ ಶವವೇ ನಿಮ್ಮನ್ನು ವೆಲ್ಕಮ್ ಮಾಡಿದರೆ ಹೇಗಿರುತ್ತದೆ?
ಆಶ್ಚರ್ಯ ಆದರೂ ಇದು ಸತ್ಯವೇ. ಸ್ಪೇನ್ನ ಟ್ರಿನಿಡಾಡ್‌ನ ಡಿಯಾಗೋ ಮಾರ್ಟಿನ್ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆತನಿಗೆ ಇನ್ನೂ 29 ವರ್ಷ. ತಂದೆ ಮಗ ಇಬ್ಬರು ಮನೆಯಲ್ಲಿದ್ದ ಸಮಯ ನೋಡಿ ದುಷ್ಕರ್ಮಿಗಳು ಇಬ್ಬರಿಗೂ ಗುಂಡಿಕ್ಕಿ ಕೊಲೆ ಮಾಡಿಬಿಟ್ಟಿದ್ದರು. ಅವರಿಬ್ಬರ ಅಂತ್ಯಸಂಸ್ಕಾರವನ್ನು ನವೆಂಬರ್ನ ಕೊನೆಯಲ್ಲಿ ಅಲ್ಲಿನ ಚರ್ಚ್ ಒಂದರಲ್ಲಿ ಇಟ್ಟುಕೊಳ್ಳಲಾಗಿತ್ತು. ಆದರೆ ಅಂತ್ಯಸಂಸ್ಕಾರಕ್ಕೆ ಯುವಕನ ಶವ ಹೋದ ರೀತಿಯನ್ನು ಕಂಡು ಬೆಚ್ಚಿದ ಚರ್ಚ್ ಶವ ಸಂಸ್ಕಾರ ಮಾಡೋದಕ್ಕೇ ಒಪ್ಪಿಗೆ ಕೊಟ್ಟಿಲ್ಲ.
ಸಾಮಾನ್ಯವಾಗಿ ಶವಗಳನ್ನು ಶವ ಪೆಟ್ಟಿಗೆಯಲ್ಲಿಟ್ಟುಕೊಂಡು ಚರ್ಚ್ಗೆ ತೆಗೆದುಕೊಂಡು ಹೋಗಲಾಗುತ್ತದೆ. ಆದರೆ ಈ ಯುವಕನ ಶವವನ್ನು ಆ ರೀತಿ ತೆಗೆದುಕೊಂಡು ಹೋಗಿಲ್ಲ. ಬಿಳಿ ಬಣ್ಣದ ಶರ್ಟ್, ಪ್ಯಾಂಟ್, ಬೂಟು, ಪಿಂಕ್ ಬಣ್ಣದ ಬ್ಲೇಸರ್ ಮತ್ತು ಟೈ ಅನ್ನು ಶವಕ್ಕೆ ತೊಡಿಸಿ ಅದನ್ನು ಖುರ್ಚಿಯೊಂದರ ಮೇಲೆ ಕೂರಿಸಲಾಗಿದೆ. ಆ ಖುರ್ಚಿಯನ್ನು ಓಪನ್ ಇದ್ದ ಕಾರೊಂದರಲ್ಲಿ ಕೂರಿಸಿಕೊಂಡು ನಗರ ಪೂರ್ತಿ ಮೆರವಣಿಗೆ ಮಾಡಿಕೊಂಡು ಚರ್ಚ್ಗೆ ತರಲಾಗಿದೆ. ಆದರೆ ಶವಪೆಟ್ಟಿಗೆಯಲ್ಲಿ ಶವ ಇಲ್ಲದ ಕಾರಣ ಯುವಕನ ಶವವನ್ನು ಚರ್ಚ್ ಒಳಗೆ ಬಿಟ್ಟುಕೊಂಡಿಲ್ಲ. ಕೇವಲ ಆತನ ತಂದೆಯ ಶವ ಪೆಟ್ಟಿಗೆಯನ್ನು ಒಳಗೆ ಸೇರಿಸಿ ಅಂತಿಮ ವಿಧಿ ವಿಧಾನ ಮಾಡಲಾಗಿದೆ.
ಖುರ್ಚಿಯಲ್ಲೇ ಚರ್ಚ್ ಸೇರಿದ್ದ ಯುವಕನ ಶವವನ್ನು ಚರ್ಚ್ನ ಮುಂಭಾಗದಲ್ಲಿ ಇರಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಅನೇಕರಿಗೆ ಅದು ಶವ ಎನ್ನುವುದೇ ಗೊತ್ತಾಗಿಲ್ಲವಂತೆ. ಹೊರಗೆ ಕುಳಿತಿರುವ ವ್ಯಕ್ತಿ ಮಾಸ್ಕ್ ಹಾಕಿಲ್ಲ ಎಂದು ಅನೇಕರು ದೂರನ್ನೂ ಕೊಟ್ಟಿದ್ದಾರಂತೆ. ವಿಶೇಷವೆಂದರೆ ಅಂತಿಮ ನಮನದ ಫೋಟೋ ಫ್ಲೆಕ್ಸ್ ಇದ್ದ ಪಕ್ಕದಲ್ಲೇ ಶವವನ್ನು ಕೂರಿಸಲಾಗಿದೆ. ಆದರೂ ಅನೇಕರಿಗೆ ಅದು ಶವ ಎನ್ನುವುದೇ ಗೊತ್ತಾಗಿಲ್ಲ. ತಂದೆಯ ಶವದ ಅಂತಿಮ ವಿಧಿ ವಿಧಾನದ ನಂತರ ಇಬ್ಬರ ಶವವನ್ನು ಶವಾಗಾರದಲ್ಲಿ ದಹಿಸಲಾಗಿದೆ. (ಏಜೆನ್ಸೀಸ್)