ನ್ಯೂಸ್

ಕರೊನಾ ವಿರುದ್ಧ ಗೆದ್ದರೂ ಡೆತ್​ನೋಟ್​ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಅಣ್ಣ-ತಾಯಿ ಬಳಿ ಮಾತಾಡಿದ್ದೇನು?

ಗದಗ: ಕರೊನಾ ವಿರುದ್ಧ ಗೆದ್ದ ಖುಷಿಯಲ್ಲಿರಬೇಕಿದ್ದ ಮನೆಯಲ್ಲೀಗ ಸಾವಿನ ಸೂತಕ ಆವರಿಸಿದೆ. ಮನೆ ಮಗ ಕರೊನಾದಿಂದ ಗುಣಮುಖನಾದ ಎಂದು ತಾಯಿ ಮತ್ತು ಅಣ್ಣ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ರೋಣ ತಾಲೂಕಿನ ಜಕ್ಕಲಿ ಗ್ರಾಮದ ನಿವಾಸಿ, ಶಿಕ್ಷಕ ಮಹಾಂತೇಶ್ ಕುದರಿ ಅವರಿಗೆ ಇತ್ತೀಚಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಅದೃಷ್ಟವಶಾತ್​ ಸೋಂಕಿನಿಂದ ಗುಣಮುಖರಾದರು. ಆದರೆ, ಖಿನ್ನತೆಯಿಂದ ಹೊರ ಬಂದಿರಲಿಲ್ಲ.

ಕರೊನಾ ಬಂದು ಹೋಗಿದೆ, ಮುಂದೆ ಏನಾಗುತ್ತೋ ಎಂದು ಆತಂಕ ಕೊಂಡಿದ್ದ ಮಹಾಂತೇಶ್, ಮುಂದೆ ಏನಾದ್ರೂ ಆಗ್ಬಹುದಾ? ಎಂದು ತಾಯಿ ಮತ್ತು ಅಣ್ಣನ ಬಳಿ ಕೇಳಿದ್ದರು. ಮೊನ್ನೆ(ಭಾನುವಾರ) ರಾತ್ರಿ ಊಟ ಮಾಡಿ ಮಹಡಿ ಮೇಲಿನ ಮನೆಯಲ್ಲಿ ಮಲಗುವುದಾಗಿ ಹೋಗಿದ್ದರು. ಅಲ್ಲಿಯೇ ಮಹಾಂತೇಶ್​(33) ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ 'ನನ್ನ ಸಾವಿಗೆ ನಾನೇ ಕಾರಣ' ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.