ನವದೆಹಲಿ: ''ಹಿಜಾಬ್ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಿ ಪಡಿಸುವ ಮೂಲಕ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನ ಕಸಿಯಲಾಗುತ್ತಿದೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಬಿಜೆಪಿ, ''ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ'' ಅಪಾಯಕಾರಿ ಎಂದು ಟೀಕಿಸಿದೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಹಿಜಾಬ್ ಕುರಿತು ಶನಿವಾರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ''ಹಿಜಾಬ್ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಿ ಮಾಡುವ ಮೂಲಕ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನ ಕಸಿಯಲಾಗುತ್ತಿದೆ. ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ. ಅವಳು ಭೇದಭಾವ ಮಾಡುವುದಿಲ್ಲ'' ಎಂದಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ, "ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ'' ಎಂದು ಟೀಕಿಸಿದೆ.
ಅತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ, ''ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮೂಲಭೂತ ಹಕ್ಕಿನ ಉಲ್ಲಂಘನೆ'' ಎಂದು ನಿನ್ನೆ(ಶುಕ್ರವಾರ) ಆಕ್ರೋಶ ಹೊರಹಾಕಿದ್ದರು. ಸದ್ಯ ಈ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.