ನ್ಯೂಸ್

ಆಡುತ್ತಿದ್ದಾಗ ಮಗುವಿನ ತಲೆ ಮೇಲೆ ಬಿತ್ತು ತೆಂಗಿನಕಾಯಿ! ಮುಂದೇನಾಯ್ತು?

ಆನೇಕಲ್: ಯಾವ ಕ್ಷಣದಲ್ಲಿ ಏನು ಘಟನೆ ನಡೆಯುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಒಂದು ಕ್ಷಣ ಎಡವಿದರೂ ಜೀವಕ್ಕೇ ಕುತ್ತು ತರುವಂತಹ ಸಂದರ್ಭಗಳು ಎದುರಾಗುತ್ತವೆ. ಹೀಗಾಗಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲುವುದಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅನೇಕಲ್​ನಲ್ಲಿ ನಡೆದಿರುವ ಈ ಘಟನೆ.

ಆನೇಕಲ್​ನ ಸರ್ಜಾಪುರದಲ್ಲಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂಪ್ರೀತ್ ಎಂಬ ಎರಡು ವರ್ಷದ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದಿದೆ. ಪರಿಣಾಮ ಮಗುವಿನ ತಲೆಬುರುಡೆಗೆ ಪೆಟ್ಟು ಬಿದ್ದಿದೆ. ಇದರಿಂದಾಗಿ ಸಂಪ್ರೀತ್​ನ ಶರೀರ ಸ್ವಾಧೀನ ಕಳೆದುಕೊಂಡಿದೆ ಎನ್ನಲಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಪೋಷಕರು ಕೂಡಲೇ ಸಂಪ್ರೀತ್​ನನ್ನು ಬೆಳ್ಳಂದೂರು ಬಳಿ ಇರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಶೀಲಿಸಿದ ವೈದ್ಯರು ಆಪರೇಷನ್ ಮಾಡಿ, 48 ಗಂಟೆ ಬಳಿಕ ಮಗುವಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಡಿಸ್ಚಾರ್ಜ್ ಮಾಡಿದ್ದಾರೆ. ತೆಂಗಿನಕಾಯಿ ಮಗುವಿನ ತಲೆ ಮೇಲೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.