ನ್ಯೂಸ್

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಒಂದೇ ಬೈಕ್​ನಲ್ಲಿ ಬರುತ್ತಿದ್ದ ಇಬ್ಬರು ಮಕ್ಕಳು, ದಂಪತಿ ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಬುಧವಾರ ತಡರಾತ್ರಿ ಖಾಸಗಿ ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾರೆ. ರಸ್ತೆಮಧ್ಯೆ ಶವಗಳು ರಕ್ತಿಕ್ತವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಹೊಳಲ್ಕೆರೆ ತಾಲೂಕಿನ ಬಿ.ದುರ್ಗಾ ಗ್ರಾಮದ ನಾಗರಾಜ್​ ಮತ್ತು ಶೈಲಜಾ(38) ದಂಪತಿ ಹಾಗೂ ಇವರ ಮಕ್ಕಳಾದ ವೀರೇಶ್(15), ಸಂತೋಷ(13) ಮೃತ ದುರ್ದೈವಿಗಳು. ನಾಗರಾಜ್​ ಅವರು ಕುಟುಂಬ ಸಮೇತ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಜಾತ್ರೆಗೆ ತೆರಳಿದ್ದರು. ವಾಪಸ್​ ಬುಧವಾರ ರಾತ್ರಿ ಒಂ​ದೇ ಬೈಕ್​ನಲ್ಲಿ ನಾಲ್ವರೂ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು.

ಮಾರ್ಗಮಧ್ಯೆ ಖಾಸಗಿ ಬಸ್​ ರೂಪದಲ್ಲಿ ಬಂದ ಜವರಾಯ ನಾಲ್ವರ ಪ್ರಾಣ ಹೊತ್ತೊಯ್ದಿದ್ದಾನೆ. ವೇಗವಾಗಿ ಬಂದ ಖಾಸಗಿ ಬಸ್​, ದಾಮ್ಮಿ ಗ್ರಾಮದ ಬಳಿ ಏಕಾಏಕಿ ಬಲಬದಿಗೆ ನುಗ್ಗಿ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿದ್ದವರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಇಬ್ಬರು ಮಕ್ಕಳು ಮತ್ತು ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಹೊಳಲ್ಕೆರೆ ಗ್ರಾಮಾಂತರ ಪೊಲೀಸರು ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ತಂದೆ-ತಾಯಿ-ಮಕ್ಕಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ನೀರವ ಮವನ ಆವರಿಸಿದೆ.