ನ್ಯೂಸ್

ಸುಧಾರಣೆಯ ದಿಟ್ಟ ಕ್ರಮ

Webdesk - Manjunatha B

ಅಸ್ಸಾಂ ಮತ್ತು ಗುಜರಾತ್​ನಲ್ಲಿ ಒಟ್ಟು 1.25 ಲಕ್ಷ ಕೋಟಿ ರೂಪಾಯಿ ಮೊತ್ತದ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶಿಲಾನ್ಯಾಸ ನೆರವೇರಿಸುವುದರೊಂದಿಗೆ, ಭಾರತದ ಕೌಶಲ ಮತ್ತು ಸಾಮರ್ಥ್ಯ ಅನಾವರಣದ ಹೊಸ ಪಥ ತೆರೆದುಕೊಂಡಿದೆ. ಗುಜರಾತ್​ನ ಧೊಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್, ಅಸ್ಸಾಂನ ಮೊರಿಗಾಂವ್​ನಲ್ಲಿ ಔಟ್​ಸೋರ್ಸ್ಡ್

ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟ್ (ಒಎಸ್​ಎಟಿ) ಮತ್ತು ಗುಜರಾತ್​ನ ಸನದ್​ನಲ್ಲಿನ ಒಎಸ್​ಎಟಿಗಳಿಗೆ ಶಿಲಾನ್ಯಾಸ ನಡೆಸಲಾಗಿದೆ. ಧೊಲೇರಾದಲ್ಲಿ ಟಾಟಾ ಸಮೂಹ ನಿರ್ವಿುಸುತ್ತಿರುವ ಭಾರತದ ಮೊಟ್ಟಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕವು 2026ರ ವರ್ಷಾಂತ್ಯದಲ್ಲಿ ಭಾರತದಲ್ಲೇ ವಿನ್ಯಾಸಗೊಳಿಸಿರುವ ಮೊದಲ ಚಿಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿ, ಕೇಂದ್ರ ಸರ್ಕಾರ 2021ರ ಡಿಸೆಂಬರ್​ನಲ್ಲಿ 76 ಸಾವಿರ ಕೋಟಿ ರೂ. ಮೌಲ್ಯದ ಉತ್ತೇಜನ ಯೋಜನೆಯನ್ನು ಪ್ರಕಟಿಸಿತ್ತು.

ಈ ಘಟಕಗಳಲ್ಲಿ ತಯಾರಾಗುವ ಚಿಪ್​ಗಳನ್ನು ಆಟೋಮೊಬೈಲ್ ಉದ್ಯಮ, ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮ, ರಕ್ಷಣಾ ವಲಯ, ದೂರಸಂಪರ್ಕ ವಲಯ ಮುಂತಾದೆಡೆ ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಸೆಮಿಕಂಡಕ್ಟರ್​ಗಳ ತಯಾರಿಕೆ, ವಿತರಣೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಕೆಲವೇ ದೇಶಗಳು ಮತ್ತು ಬೆರೆಳೆಣಿಕೆಯ ಕಂಪನಿಗಳು ಪಾರಮ್ಯ ಸಾಧಿಸಿವೆ. ಹೆಚ್ಚಿನ ತಂತ್ರಜ್ಞಾನ, ಭಾರಿ ಬಂಡವಾಳ ಮತ್ತು ಇಂಜಿನಿಯರಿಂಗ್ ಕೌಶಲ ಬಯಸುವ ಸೆಮಿಕಂಡಕ್ಟರ್ ಚಿಪ್ ತಯಾರಿಕೆ ವಲಯವು ಆಧುನಿಕ ಉದ್ಯಮ ಜಗತ್ತಿಗೆ ಬಹುಮುಖ್ಯವಾದುದು. ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಲ್ಲಿ ದಕ್ಷಿಣ ಕೊರಿಯಾ, ತೈವಾನ್ ಮತ್ತು ಚೀನಾ ಶೇಕಡ 70ರಷ್ಟು ಪಾಲು ಹೊಂದಿವೆ. ಇನ್ನುಳಿದ ಪಾಲು ಅಮೆರಿಕ ಮತ್ತು ಜಪಾನ್ ಕೈಯಲ್ಲಿದ್ದು, ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಭಾರತ ಸಾಗಬೇಕಿರುವ ದಾರಿ ದೀರ್ಘವಾಗಿದ್ದರೂ, ಈ ಯೋಜನೆಗಳ ಮೂಲಕ ಶುಭಾರಂಭವಂತೂ ಆಗಿದೆ. ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯಲ್ಲಿ ಪ್ರವೇಶ ಗಿಟ್ಟಿಸಲು ಭಾರತದ ಉದ್ಯಮ ವಲಯಕ್ಕೆ ಈ ಘಟಕಗಳಿಂದ ಅನುವಾಗಲಿದೆ. ಧೊಲೆರಾದಲ್ಲಿ 28 ನ್ಯಾನೋಮೀಟರ್ಸ್ ವ್ಯಾಪ್ತಿಯ ಚಿಪ್​ಗಳನ್ನು ವಿನ್ಯಾಸಗೊಳಿಸಲು ಉದ್ದೇಶಿಸಲಾಗಿದೆ.

ಮುಂದುವರಿದ ತಂತ್ರಜ್ಞಾನಗಳಿಗೆ ಬೇಕಾದ ಚಿಪ್ ಶೇಕಡ 90ರಷ್ಟು ತೈವಾನ್​ನಲ್ಲೇ ಉತ್ಪಾದನೆಯಾಗುತ್ತಿದೆ ಎಂಬುದು ಗಮನಾರ್ಹ. ಆದರೆ, ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಭಾರತ ಮುಂದಾಗಿರುವುದು ಆಶಾವಾದವನ್ನು ಸೃಷ್ಟಿಸಿದೆ. ಪ್ರಸ್ತುತ ಶಿಲಾನ್ಯಾಸಗೊಂಡಿರುವ ಮೂರು ಘಟಕಗಳ ಜತೆ ಇನ್ನಷ್ಟು ಕಡೆಗಳಲ್ಲಿ ಘಟಕ ಆರಂಭಿಸುವುದು ಸೂಕ್ತ. ಏಕೆಂದರೆ, ಈ ಕ್ಷೇತ್ರದಲ್ಲಿ ಭಾರತ ತ್ವರಿತ ಗತಿಯಲ್ಲಿ ಮುಂದಡಿ ಇಡಬೇಕಿದೆ. ಚಿಪ್ ವಿನ್ಯಾಸ ವಲಯದಲ್ಲಿ ಗಮನಾರ್ಹ ಶಕ್ತಿಯನ್ನು ಹೊಂದಿರುವ ಭಾರತ, ಅದನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಒಟ್ಟಾರೆ, ಕಾಲದ ಅಗತ್ಯತೆಯನ್ನು ಮನಗಂಡು ಭಾರತ ಸುಧಾರಣೆಯ ಪಥದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಯುವಶಕ್ತಿಯ ವಿಶ್ವಾಸವನ್ನೂ ಹೆಚ್ಚಿಸಲಿದೆ.