ನ್ಯೂಸ್

ನಾನು ಕಳ್ಳರ ಸರ್ದಾರ್... ಎನ್ನುತ್ತಾ ತಮ್ಮದೇ ಸರ್ಕಾರವನ್ನು ಟೀಕಿಸಿದ್ದ ಬಿಹಾರದ ಸಚಿವ ದಿಢೀರ್​ ರಾಜೀನಾಮೆ

ಮೂರ್ (ಬಿಹಾರ): 'ನಾನು ಸಚಿವನಾಗಿರುವ ಕೃಷಿ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಆ ಕಳ್ಳರ ಸರ್ದಾರ್. ನನಗಿಂತಲೂ ಸರ್ಕಾರದಲ್ಲಿ ದೊಡ್ಡ ದೊಡ್ಡ ಸರ್ದಾರ್​ಗಳಿದ್ದಾರೆ. ನಮ್ಮ ಇಲಾಖೆಯಲ್ಲಿ ಕಳ್ಳತನ ಮಾಡದೆ ಇರುವ ಒಂದೇ ಒಂದು ವಿಭಾಗವೂ ಇಲ್ಲ. ಸರ್ಕಾರ ಬದಲಾದರೂ ಸರ್ಕಾರದ ಕಾರ್ಯವೈಖರಿ ಮಾತ್ರ ಮೊದಲಿನಂತೆಯೇ ಇದೆ...’ ಎಂದು ಇತ್ತೀಚಿಗೆ ತಮ್ಮದೇ ಸರ್ಕಾರದ ಗಂಭೀರ ಆರೋಪ ಮಾಡಿದ್ದ ಬಿಹಾರ ಕೃಷಿ ಸಚಿವ ಸುಧಾಕರ್​ ಸಿಂಗ್, ಇದೀಗ ತಮ್ಮ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದಾರೆ

ಆ.10ರಂದು ನಿತೀಶ್​ಕುಮಾರ್​ ನೇತೃತ್ವದಲ್ಲಿ ಕಾಂಗ್ರೆಸ್​ ಮತ್ತು ಆರ್​ಜೆಡಿ ಮೈತ್ರಿ ಸರ್ಕಾರ ರಚನೆಯಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು 1 ತಿಂಗಳಾಗುತ್ತಿದ್ದಂತೆ ಬಿಹಾರದ ಕೈಮೂರ್​ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಕೃಷಿ ಸಚಿವ ಸಚಿವ ಸುಧಾಕರ್ ಸಿಂಗ್ ಮಾತನಾಡುತ್ತಾ, ತಮ್ಮದೇ ಸರ್ಕಾರವನ್ನ ಟೀಕಿಸಿದ್ದರು. ಸರ್ಕಾರ ಬದಲಾಗಿದೆ ಅಷ್ಟೇ, ಆದರೆ ಕೆಲಸದಲ್ಲಿ ಯಾವ ಬದಲಾಣೆಯೂ ಆಗಿಲ್ಲ ಎನ್ನುತ್ತಾ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದು ಸಿಎಂ ನಿತೀಶ್​ಕುಮಾರ್​ಗೆ ಭಾರೀ ಮುಜುಗರ ಉಂಟು ಮಾಡಿತ್ತು.

ಇಂದು​ ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸುಧಾಕರ್ ಸಿಂಗ್​ ಅವರ ತಂದೆ ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಅವರೇ ಖಚಿತ ಪಡಿಸಿದ್ದಾರೆ. ನನ್ನ ಮಗ ಯಾವಾಗಲೂ ರೈತರ ಪರ ಧ್ವನಿ ಎತ್ತುವವ. ರಾಜ್ಯದಲ್ಲಿ ಮಹಾಘಟಬಂಧನ್ ಸರ್ಕಾರವಿದ್ದು, ಮೈತ್ರಿಯಲ್ಲಿ ಬಿರುಕು ಹೆಚ್ಚಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಂದೆ ತಿಳಿಸಿದ್ದಾರೆ.

ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿರುವ ಸುಧಾಕರ್​ ಸಿಂಗ್​, ತಮ್ಮ ದಿಟ್ಟ ಮಾತು ಮತ್ತು ಸರಳತೆಯಿಂದಲೇ ಗಮನ ಸೆಳೆಯುತ್ತಾರೆ. ಕೆಲವು ದಿನಗಳ ಹಿಂದೆ ತಮ್ಮ ಕ್ಷೇತ್ರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ್ದ ಸುಧಾಕರ್​ ಸಿಂಗ್, "ನಮ್ಮ ಇಲಾಖೆಯ ಅಧಿಕಾರಿಗಳು ಲಂಚ ಕೇಳಿದರೆ ಶೂಗಳಿಂದ ಹೊಡೆಯಿರಿ" ಎಂದು ಜನರಿಗೆ ಹೇಳಿದ್ದರು. 2020ರ ವಿಧಾನಸಭಾ ಚುನಾವಣೆಯಲ್ಲಿ ರಾಮಗಢ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.