ಲಂಡನ್: 81 ವರ್ಷದ ವೃದ್ಧೆಯೊಬ್ಬರು 46 ವರ್ಷದ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಬ್ರಿಟನ್ನಲ್ಲಿ ನಡೆದಿದೆ. ಮದುವೆಯಾದರೂ ಈ ದಂಪತಿ ಒಟ್ಟಿಗೆ ಬದುಕಲಾಗುತ್ತಿಲ್ಲವೆಂದು ಇದೀಗ ವೃದ್ಧೆ ಕಣ್ಣೀರು ಸುರಿಸುತ್ತಿದ್ದಾರೆ.
ಐರಿಸ್ ಜೋನ್ಸ್ ಹೆಸರಿನ ವೃದ್ಧೆ ಬ್ರಿಟನ್ನಲ್ಲಿ ವಾಸವಿದ್ದಾರೆ. ಈಕೆ ಫೇಸ್ಬುಕ್ನಲ್ಲಿ ಈಜಿಪ್ಟ್ನ ಮೊಹಮ್ಮದ್ ಅಹ್ಮದ್ ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿದ್ದು, ಈಜಿಪ್ಟ್ಗೆ ಹೋದ ಐರಿಸ್ ಮೊಹಮ್ಮದ್ರನ್ನು ಮದುವೆಯಾಗಿದ್ದಾರೆ. ನಂತರ ಅಲ್ಲಿನ ಹವಾಮಾನಕ್ಕೆ ಇಳಿ ವಯಸ್ಸಿನ ದೇಹ ಹೊಂದಿಕೊಳ್ಳದ ಕಾರಣ ಬ್ರಿಟನ್ಗೆ ವಾಪಾಸಾಗಿದ್ದಾರೆ. ಆದರೆ ಮೊಹಮ್ಮದ್ಗೆ ಬ್ರಿಟನ್ಗೆ ಬರಲು ಸಾಧ್ಯವಾಗಿಲ್ಲ. ಅವರ ಬ್ರಿಟನ್ ವೀಸಾ ಪಡೆಯುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಹೆಂಡತಿಯೊಂದಿಗೆ ಬದುಕಲು ಸಾಧ್ಯವಾಗುತ್ತಿಲ್ಲ.
ಮದುವೆಯಾದರೂ ಬ್ರಿಟನ್ನಲ್ಲಿ ಒಬ್ಬಂಟಿ ಜೀವನ ನಡೆಸುತ್ತಿರುವ ಐರಿಸ್ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದಾರಂತೆ. ನನಗೆ ವಯಸ್ಸಾಗಿದೆ. ಇಂದು ಅಥವಾ ನಾಳೆ ಸಾಯಬಹುದು. ನನ್ನ ಗಂಡ ನನ್ನ ಬಳಿ ಬರುವುದರೊಳಗೆ ನಾನು ಸತ್ತೇ ಹೋದರೆ ಎನ್ನುವ ಭಯವಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ದಯಮಾಡಿ ನನ್ನ ಗಂಡನಿಗೆ ವೀಸಾ ಸಿಗಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ ಐರಿಸ್. (ಏಜೆನ್ಸೀಸ್)