ನ್ಯೂಸ್

ಕಳೆದ 6 ತಿಂಗಳಲ್ಲಿ 9 ಶೋಕಾಸ್​ ನೋಟಿಸ್​! ಏರ್ ಇಂಡಿಯಾ ಸಮಸ್ಯೆ ರಾಜ್ಯಸಭೆಯಲ್ಲಿ ಪ್ರಸ್ತಾಪ | Air India

Air India: ಕಳೆದ ಆರು ತಿಂಗಳಲ್ಲಿ ವಿಮಾನಯಾನ ಸಂಸ್ಥೆ ಏರ್​ ಇಂಡಿಯಾಗೆ ಸರ್ಕಾರ ಬರೋಬ್ಬರಿ 9 ಶೋಕಾಸ್ ನೋಟಿಸ್​ ನೀಡಿದೆ. ಸುರಕ್ಷತಾ ನಿಯಮ ಉಲ್ಲಂಘನೆಯನ್ನು ಗುರುತಿಸಿ ಏರ್ ಇಂಡಿಯಾಗೆ ಒಟ್ಟು 9 ಶೋಕಾಸ್ ನೋಟಿಸ್‌ಗಳನ್ನು ಸರ್ಕಾರ ನೀಡಿರುವುದಾಗಿ ಸಂಸತ್ತಿನಲ್ಲಿ ತಿಳಿಸಲಾಯಿತು.

ಆವರ್ತಕ ನಿರ್ವಹಣೆ, ಕಾರ್ಯಾಚರಣೆಗಳು ಅಥವಾ ವಿಮಾನ ಸಿಬ್ಬಂದಿಯ ಬಗ್ಗೆ ಸೇರಿದಂತೆ ಏರ್ ಇಂಡಿಯಾದ ಸುರಕ್ಷತೆ, ವಿಶ್ವಾಸಾರ್ಹತೆ ಅಥವಾ ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಡಿಜಿಸಿಎ ಅಥವಾ ಇತರ ಅಧಿಕಾರಿಗಳು ಯಾವುದೇ ಸೂಚನೆಗಳು ಅಥವಾ ಸಂವಹನಗಳನ್ನು ನೀಡಿದ್ದಾರೆಯೇ ಎಂದು ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಶ್ನಿಸಿದ್ದರು. ಇದಕ್ಕೆ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ಕಳೆದ ಆರು ತಿಂಗಳಲ್ಲಿ ಅಪಘಾತಕ್ಕೀಡಾದ ವಿಮಾನಗಳಿಗೆ ಸಂಬಂಧಿಸಿದಂತೆ ಏರ್ ಇಂಡಿಯಾದ ವಿಶ್ವಾಸಾರ್ಹತಾ ವರದಿಗಳ ಪ್ರಕಾರ, ಯಾವುದೇ ಉದ್ದೇಶಪೂರ್ವಕ ಅಥವಾ ದಿಕ್ಕು ಬದಲಿಸುವಂತ ಕೆಲಸಗಳು ನಡೆದಿಲ್ಲ ಎಂದು ಮೊಹೋಲ್ ವರದಿ ಮುಂದಿಟ್ಟು ಹೇಳಿದ್ದಾರೆ. ಪ್ರಸ್ತುತ, ಜೂನ್​ 12ರಂದು ನಡೆದ ಅಹಮದಾಬಾದ್ ವಿಮಾನ ಅಪಘಾತದ ತನಿಖೆಯನ್ನು ವಿಸ್ತೃತವಾಗಿ ನಡೆಸಲಾಗುತ್ತಿದೆ ಎಂದಿದ್ದಾರೆ,(ಏಜೆನ್ಸೀಸ್).

ಭಾರತದ ಇತಿಹಾಸದಲ್ಲೇ ಇದು ಮಹಾ ದುರಂತ!

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಗುರುವಾರ (ಜೂನ್​ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ.

ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.