24 ಬಾರಿ, ಟ್ರಂಪ್​ ಹೇಳಿದ್ದೇಕೆ? ಮುಂಗಾರು ಅಧಿವೇಶನದಲ್ಲಿ ಖರ್ಗೆ ಪ್ರಶ್ನೆಗಳ ಸುರಿಮಳೆ; ಜೆಪಿ ನಡ್ಡಾ ಉತ್ತರ | Monsoon Session

ವಿಜಯವಾಣಿ (47)
Published on

Parliament Monsoon Session: ಇಂದಿನಿಂದ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಸಭೆಯಲ್ಲಿ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದವು. ಅಂತೆಯೇ ಕಲಾಪ ಆರಂಭವಾದ ಕೆಲವೇ ಸಮಯಗಳಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಿದ್ದರಿಂದ ಕಲಾಪವನ್ನು ಇಂದು (ಜು.21) ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಇದೀಗ ಮತ್ತೆ ಕಲಾಪ ಆರಂಭವಾಗಿದ್ದು, ಮತ್ತೆ ವಿಪಕ್ಷಗಳು ಪಹಲ್ಗಾಮ್​ ದಾಳಿ ವಿಚಾರವಾಗಿ ಮಾತನಾಡಲು ಒತ್ತಾಯಿಸಿವೆ.

ಸಂಸತ್ತಿನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ಘೋಷಣೆಗಳನ್ನು ಕೂಗಿದರು. ಈ ಪ್ರಕ್ರಿಯೆಯಲ್ಲಿ ಅಧಿವೇಶನವನ್ನು ಹಲವಾರು ಬಾರಿ ಮುಂದೂಡಲಾಯಿತು. ಆದಾಗ್ಯೂ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಆಪರೇಷನ್ ಸಿಂಧೂರ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರಶ್ನಿಸಿದರು.

"ದೇಶದ ಮೇಲೆ ಭಯೋತ್ಪಾದಕ ದಾಳಿಗಳು ನಡೆದಾಗ, ಎಲ್ಲಾ ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಒಗ್ಗಟ್ಟಾಗಿ ನಿಂತಿವೆ. ಆ ಸಮಯದಲ್ಲಿ, ಕಾಂಗ್ರೆಸ್ ಯಾವುದೇ ಷರತ್ತುಗಳಿಲ್ಲದೆ ಸರ್ಕಾರವನ್ನು ಬೆಂಬಲಿಸಿತು. ನೈತಿಕತೆಯನ್ನು ಹೆಚ್ಚಿಸಲು ನಾವು ಸೇನೆಯನ್ನು ಬೆಂಬಲಿಸಿದ್ದೇವೆ. ಏಪ್ರಿಲ್ 22ರಂದು ಪಹಲ್ಗಾಮ್ ದಾಳಿ ನಡೆಯಿತು. ಇಲ್ಲಿಯವರೆಗೆ, ಉಗ್ರರು ಸಿಕ್ಕಿಬಿದ್ದಿಲ್ಲ. ಪಹಲ್ಗಾಮ್ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ನೀವು ಜಗತ್ತಿಗೆ ಹೇಳಿದ್ದನ್ನೇ ನಾನಿಲ್ಲಿ ಮಾತನಾಡುತ್ತಿದ್ದೇನೆ" ಎಂದರು.

"ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗುಪ್ತಚರ ವೈಫಲ್ಯವಿದೆ ಎಂದು ಹೇಳಿಕೆ ನೀಡಿದ್ದಾರೆ. ನೀವು ನಮ್ಮಿಂದ ಸಹಾಯ ಪಡೆದುಕೊಂಡಿದ್ದೀರಿ. ಹೀಗಾಗಿ ನೀವಿಲ್ಲಿ ನಮಗೆ ಎಲ್ಲವನ್ನೂ ವಿವರಿಸಬೇಕು. ನಾವು ಮಧ್ಯಸ್ಥಿಕೆ ವಹಿಸಿಕೊಂಡ ಬಳಿಕ ಕದನ ವಿರಾಮ ಸಂಭವಿಸಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಬಾರಿ ಹೇಳಿದ್ದಾರೆ. ಇದು ದೇಶಕ್ಕೆ ನಾಚಿಕೆಗೇಡಿನ ಸಂಗತಿ. ಕದನ ವಿರಾಮದ ಬಗ್ಗೆ ಟ್ರಂಪ್ ಆ ರೀತಿ ಹೇಳಲು ಕಾರಣವೇನು? ಇದಕ್ಕೆಲ್ಲ ಸರ್ಕಾರ ಉತ್ತರಿಸಬೇಕು" ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆಗಳ ಸುರಿಮಳೆ ಹರಿಸಿದರು.

ರಾಜ್ಯಸಭೆಯ ಸದನದ ನಾಯಕ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿ, "ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ನಾವು ಪ್ರಪಂಚದ ಮುಂದಿಡುತ್ತೇವೆ. ದೇಶದ ಸ್ವಾತಂತ್ರ್ಯದ ಬಳಿಕ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಹಿಂದೆಂದೂ ಮಾಡಲಾಗಿಲ್ಲ. ಮೋದಿ ನೇತೃತ್ವದಲ್ಲಿ ಭಾರತ ಸರ್ಕಾರ ಎಲ್ಲವನ್ನೂ ಚರ್ಚಿಸಲು ಸಿದ್ಧವಾಗಿದೆ" ಎಂದು ತಿಳಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net