ಸಾಂದರ್ಭಿಕ ಚಿತ್ರ 
ನ್ಯೂಸ್

ಕಾಣೆಯಾಗಿದ್ದ ನಿವೃತ್ತ ಪೊಲೀಸ್​, ಮೋರಿಯಲ್ಲಿ ಶವವಾಗಿ ಪತ್ತೆ!

ಮುಂಬೈ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಿವೃತ್ತ ಪೊಲೀಸ್ ಮೋರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 87 ವರ್ಷದ ಇವರ ಮೃತದೇಹ ಭಾನುವಾರ ಮಧ್ಯಾಹ್ನ ಮುಂಬೈನ ನವ್​ಘರ್​ ಎಂಬಲ್ಲಿನ ಮೋರಿಯಲ್ಲಿ ಕಂಡುಬಂದಿದೆ.

ಶಿವದಾಸ್​ ಕುಮಾವತ್ ಎಂಬ ಹೆಸರಿನ ಇವರು ಅಸಿಸ್ಟೆಂಟ್ ಇನ್​​ಸ್ಪೆಕ್ಟರ್ ಆಗಿ ನಿವೃತ್ತರಾಗಿದ್ದರು. ಇವರು ಮುಳುಂದದ ಎಂಎಚ್​ಎಡಿಎ ಕಾಲನಿಯ ಮನೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಮರೆವು ರೋಗದಿಂದ ಬಳಲುತ್ತಿದ್ದ ಇವರು ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದು. ಈ ಮನೆಯವರು ಪೊಲೀಸರಿಗೆ ದೂರು ನೀಡಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ನಿನ್ನೆ ಮಧ್ಯಾಹ್ನ ಸಾರ್ವಜನಿಕರೊಬ್ಬರು ಮೋರಿಯಲ್ಲಿ ಇವರ ಶವ ಕಾಣಿಸಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವದ ಮೇಲೆ ಯಾವುದೇ ಅನುಮಾನಾಸ್ಪದ ಗಾಯದ ಗುರುತು ಕಂಡುಬಂದಿಲ್ಲ. ಹೀಗಾಗಿ ಅವರೇ ಅಕಸ್ಮಾತ್ ಆಗಿ ಮೋರಿಗೆ ಬಿದ್ದು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದ್ದು, ಆಕಸ್ಮಿಕ ಸಾವು ಪ್ರಕರಣ ಎಂದು ದೂರು ದಾಖಲಿಸಿಕೊಳ್ಳಲಾಗಿದೆ.