ತಿರುಪತಿ: ಜನವರಿ 2ರ ವೈಕುಂಠ ಏಕಾದಶಿ ದಿನದಂದು ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಜನಸಾಗರ ಹರಿದು ಬಂದ ರೀತಿಯಲ್ಲೇ ಹುಂಡಿಗೂ ಭರ್ಜರಿ ಕಾಣಿಕೆ ಸಂದಾಯವಾಗಿದೆ. ಆ ದಿನ ದೇವಸ್ಥಾನದ ಹುಂಡಿಗೆ ಬಂದಿರುವ ಕಾಣಿಕೆ ಮೊತ್ತ 7.6 ಕೋಟಿ ರೂಪಾಯಿಯಾಗಿದ್ದು ಇದು ದೈನಿಕ ಕಾಣಿಕೆಯ ದಾಖಲೆಯಾಗಿದೆ. ಕಳೆದ ವರ್ಷ ಅಕ್ಟೋಬರ್ 23ರಂದು ಹುಂಡಿ ಎಣಿಸಿದಾಗ 6.31 ಕೋಟಿ ರೂಪಾಯಿ ಸಂಗ್ರಹವಾಗಿದ್ದೇ ಈ ಹಿಂದಿನ ದಾಖಲೆಯ ದೈನಿಕ ಕಾಣಿಕೆ ಮೊತ್ತವಾಗಿತ್ತು ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷ ಪ್ರವೇಶದ ಮರು ದಿನವೇ ಆಚರಿಸಲಾದ ವೈಕುಂಠ ಏಕಾದಶಿಯಂದು ಒಟ್ಟು 69,414 ಭಕ್ತರು ದೇವಸ್ಥಾನದ ಉತ್ತರ ದ್ವಾರದ ಮೂಲಕ ಪ್ರವೇಶಿಸಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಸಾಂಪ್ರದಾಯಿಕವಾಗಿ, ವೈಕುಂಠ ಏಕಾದಶಿ ದಿನ ಹಾಗೂ ಮರು ದಿನ ದ್ವಾದಶಿಯಂದು ಮಾತ್ರವೇ ಬಾಲಾಜಿ ಮಂದಿರದಲ್ಲಿ ಉತ್ತರ ದ್ವಾರದ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ, 2020ರಿಂದ ಈ ತಾತ್ಕಾಲಿಕ ದ್ವಾರವನ್ನು 10 ದಿನ ಕಾಲ ಮುಕ್ತವಾಗಿಡಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಗರಿಷ್ಠ ಸಂಖ್ಯೆಯ ಭಕ್ತರಿಗೆ ಉತ್ತರ ದ್ವಾರ ದರ್ಶನಂಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶ. ಈ ಬಾರಿ ಜನವರಿ 2ರಿಂದ 11ರ ವರೆಗೆ ಉತ್ತರ ದ್ವಾರ ದರ್ಶನ ಇರುತ್ತದೆ. ಸೋಮವಾರ ದರ್ಶನ ಪಡೆದವರಲ್ಲಿ ಹಲವು ರಾಜ್ಯಗಳ ಸಚಿವರು, ರಾಜ್ಯಪಾಲರು, ವ್ಯಾಪಾರೋದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದ್ದಾರೆ.
8 ಲಕ್ಷ ಭಕ್ತರು: ವಿಶೇಷ ಉತ್ತರ ದ್ವಾರವನ್ನು ಮುಕ್ತವಿಡುವುದರಿಂದ ಪ್ರತಿ ದಿನ 80,000ದ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಸಾಧ್ಯವಾಗುತ್ತದೆ. ಹೀಗಾಗಿ ಜನವರಿ 11ರ ವೇಳೆಗೆ ಒಟ್ಟು ಸುಮಾರು 8 ಲಕ್ಷ ಜನರು ದರ್ಶನ ಪಡೆಯುವ ಸಾಧ್ಯತೆಯಿದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರೊನಾ ಸಾಂಕ್ರಾಮಿಕತೆ ನಿರ್ಬಂಧಗಳನ್ನು ತೆಗೆದು ಹಾಕಿದ ನಂತರ ತಿರುಪತಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿದೆ. ಕಳೆದ ಒಂದು ದಶಕದಲ್ಲಿ ಹುಂಡಿ ದೇಣಿಗೆಯಲ್ಲಿ ಭಾರಿ ಬದಲಾವಣೆಯಾಗಿದ್ದು 2012ರಿಂದ 2022ರ ನಡುವೆ ಅದು ದುಪ್ಪಟ್ಟುಗೊಂಡಿದೆ.
6 ಕೋಟಿ ರೂಪಾಯಿ ಕಾಣಿಕೆ: ಇತರ ಪ್ರಮುಖ ಹಿಂದು ದೇವಾಲಯಗಳ ದೈನಿಕ ಹುಂಡಿ ಕಾಣಿಕೆ ಸರಾಸರಿ 4 ಕೋಟಿ ರೂಪಾಯಿ ಆಗಿದ್ದರೆ ತಿರುಪತಿ ದೇವಸ್ಥಾನದ್ದು ಸುಮಾರು 6 ಕೋಟಿ ರೂ. ಆಗಿದೆ. ಜನವರಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಲಿದ್ದು 2022-23 ಹಣಕಾಸು ವರ್ಷವೊಂದರಲ್ಲೇ ಸುಮಾರು 1,500 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆಯಿದೆ.