ನವದೆಹಲಿ: ಕಳೆದ ವಾರದವರೆಗೂ ಅಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ವೀಕೆಂಡ್ನಲ್ಲಿ ಎರಡು ದಿನ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು.
ಆದರೆ, ಅನ್ಲಾಕ್ 4 ಘೋಷಣೆಯಾಗುತ್ತಿದ್ದಂತೆ ಹರಿಯಾಣದಲ್ಲೂ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಇದೀಗ ಮತ್ತೆ ಕರೊನಾ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಒಂದೇ ಢಾಬಾದ 65 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಹರಿಯಾಣದ ಮುರ್ಥಾಲ್ ಎಂಬಲ್ಲಿನ ಪ್ರಸಿದ್ಧ ಸುಖದೇವ್ ಢಾಬಾದ 65 ಸಿಬ್ಬಂದಿ ಕರೊನಾ ಪಾಸಿಟಿವ್ ಆಗಿದ್ದಾರೆ. ಸೋಂಕಿಗೆ ಒಳಗಾದ ಯಾವ ಸಿಬ್ಬಂದಿಯಲ್ಲೂ ರೋಗ ಲಕ್ಷಣಗಳು ಇಲ್ಲದಿರುವುದರಿಂದ ಎಲ್ಲರನ್ನೂ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಢಾಬಾವನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಸೋಂಕು ನಿವಾರಕವನ್ನು ಸಿಂಪಡಿಸಲಾಗಿದೆ. ಜತೆಗೆ, ಢಾಬಾದಲ್ಲಿ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುರ್ಥಾಲ್ನ ಅಮ್ರಿಕ್ ಸುಖ್ದೇವ್ ಢಾಬಾ ಅತಿ ದೊಡ್ಡ ಢಾಬಾಗಳಲ್ಲಿ ಒಂದಾಗಿದ್ದು, ಹರಿಯಾಣಾ- ದೆಹಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ಊಟೋಪಚಾರದ ಕೇಂದ್ರಗಳಿವೆ. ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಅಧಿಕಾರಿಗಳಿಗೆ ಸಹಜವಾಗಿಯೇ ಆತಂಕ ಶುರುವಾಗಿದೆ.