ನ್ಯೂಸ್

ಬೆಳಗಾವಿಯ ಬಾಚಿ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.65 ಲಕ್ಷ ರೂ. ಸೀಜ್​

ಚಿಕ್ಕೋಡಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಅಕ್ರಮ ತಡೆಗಟ್ಟಲು ಪ್ರತಿಯೊಂದು ಸ್ಥಳದಲ್ಲೂ ಚೆಕ್ ಪೋಸ್ಟ್​ಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಇಲ್ಲದ 6.65 ಲಕ್ಷ ರೂಪಾಯಿಯನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿಕೊಂಡಿದ್ದಾರೆ.

ಮಧ್ಯರಾತ್ರಿ 12.15ಕ್ಕೆ ಬೆಳಗಾವಿ ಗ್ರಾಮಾಂತರ ವಲಯದ ಬಾಚಿ ಚೆಕ್​ಪೋಸ್ಟ್​ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಮುಲ್​ ವಿದ್ಯಾಧರ್​ ಎಂಬುವರಿಂದ ಪ್ರಶಾಂತ್​ ದೀಕ್ಷಿತ ನೇತೃತ್ವದ ಎಸ್​ಎಸ್​ಟಿ ತಂಡ ತಪಾಸಣೆ ನಡೆಸಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಶುಕ್ರವಾರವಷ್ಟೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳಿಲ್ಲದ 7.98 ಲಕ್ಷ ರೂ. ಹಣವನ್ನು ಚುನಾವಣಾ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ತಂಡ ವಶಕ್ಕೆ ಪಡೆದಿತ್ತು.

ಖಾನಾಪುರದ ನಿವಾಸಿ ಸಂಜಯ ಬಸವರಾಜ ರೆಡ್ಡಿ ಎನ್ನುವವರು ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಹಣ ಇಟ್ಟುಕೊಂಡಿದ್ದರು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವ ವೇಳೆ ಹಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದರು. ಮುಟ್ಟುಗೋಲು ಹಾಕಿಕೊಂಡು ಹಣವನ್ನು ಖಾನಾಪುರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಖಾನಾಪುರ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.