ನ್ಯೂಸ್

ಸೈಬರ್​ ಹಗರಣದಲ್ಲಿ ಸಿಲುಕಿದ್ದ 47 ಭಾರತೀಯರ ರಕ್ಷಣೆ; ಎಚ್ಚರದಿಂದಿರುವಂತೆ ರಾಯಭಾರಿ ಕಚೇರಿ ಸೂಚನೆ

ನವದೆಹಲಿ: ಬೊಕಿಯೊ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (SEZ) ನಲ್ಲಿರುವ ಸೈಬರ್ ಹಗರಣ ಕೇಂದ್ರಗಳಲ್ಲಿ ಸಿಕ್ಕಿಬಿದ್ದಿದ್ದ 47 ಭಾರತೀಯರನ್ನು ರಕ್ಷಸಿರುವುದಾಗಿ ಲಾವೋಸ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶನಿವಾರ(ಆಗಸ್ಟ್​​ 31) ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಪ್ರಜೆಗಳಿಗೆ ಲಾವೋಸ್ ಮತ್ತು ಕಾಂಬೋಡಿಯಾದಿಂದ ನೀಡುವ ಉದ್ಯೋಗದ ಆಫರ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಎಚ್ಚರಿಸಿದೆ. ಹಗರಣಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಸೂಚಿಸಿದೆ. 

ಬೊಕಿಯಾ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯ (SEZ) ವ್ಯಾಪ್ತಿಯಲ್ಲಿ ಸೈಬರ್ ಹಗರಣ ಕೇಂದ್ರಗಳಲ್ಲಿ ಸಿಕ್ಕಿಬಿದ್ದ 47 ಭಾರತೀಯರನ್ನು ರಾಯಭಾರ ಕಚೇರಿ ರಕ್ಷಿಸಿದೆ. ಗೋಲ್ಡನ್ ಟ್ರಯಾಂಗಲ್ SEZ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಅವರ ಶಿಸ್ತುಕ್ರಮದ ನಂತರ ಲಾವೋಸ್ ಅಧಿಕಾರಿಗಳು 29 ಮಂದಿಯನ್ನ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದಾರೆ. ಆದರೆ ಇತರ 18 ಜನರು ಸಹಾಯ ಕೋರಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾಗಿ ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದೆ.

ವಂಚಕರು ಜನರನ್ನು ಆಕರ್ಷಿಸುವ ಸಲುವಾಗಿ ಡೇಟಿಂಗ್​ ಆ್ಯಪ್​ನಲ್ಲಿ ಮಹಿಳೆಯರಂತೆ ಚಾಟ್ ಮಾಡುತ್ತಾರೆ. ಬಳಿಕ ಕ್ರಿಪ್ಟೋಕರೆನ್ಸಿ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಎಷ್ಟೆಲ್ಲಾ ಆದಾಯ ಎಂಬುದರ ಬಗ್ಗೆ ಬ್ರೈನ್​ವಾಷ್​​ ಮಾಡುತ್ತಾರೆ. ಭಾರತದಲ್ಲಿ ಅನೇಕರನ್ನು ಈ ರೀತಿ ವಂಚಿಸಲಾಗಿದೆ ಎಂದು ರಕ್ಷಿಸಲ್ಪಟ್ಟ ಭಾರತೀಯರಲ್ಲಿ ಒಬ್ಬರು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ರಾಜಧಾನಿ ವಿಯೆಂಟಿಯಾನ್‌ನಿಂದ ಬೋಕಿಯೊಗೆ ಸ್ಥಳೀಯ ಅಧಿಕಾರಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದರು. ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರಿಯಾಗಿರುವ ಪ್ರಶಾಂತ್ ಅಗರವಾಲ್ ಅವರು ಪಾರಾದ ತಂಡವನ್ನು ಭೇಟಿಯಾಗಿ ಅವರು ಎದುರಿಸಿದ ಸವಾಲುಗಳನ್ನು ಚರ್ಚಿಸಲು ಮತ್ತು ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ರಾಯಭಾರ ಕಚೇರಿಯು ಲಾವೋಸ್ ಅಧಿಕಾರಿಗಳೊಂದಿಗೆ ರಕ್ಷಿಸಲ್ಪಟ್ಟವರನ್ನು ಭಾರತಕ್ಕೆ ಕಳುಹಿಸಲು ಮಾಡಬೇಕಾದ ಕ್ರಮಗಳನ್ನು ಪೂರ್ಣಗೊಳಿಸಿದೆ. ರಕ್ಷಿಸಲ್ಪಟ್ಟವರಲ್ಲಿ 30 ಮಂದಿ ಈಗಾಗಲೇ ಭಾರತಕ್ಕೆ ಕಳುಹಿಸಲಾಗಿದೆ.ಉಳಿದ 17 ಮಂದಿ ಅಂತಿಮ ಪ್ರಯಾಣದ ವ್ಯವಸ್ಥೆಗಾಗಿ ಕಾಯುತ್ತಿದ್ದು ಅವರು ಶೀಘ್ರದಲ್ಲೇ ಹೊರಡಲಿದ್ದಾರೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. (ಏಜೆನ್ಸೀಸ್​​)