ಅ.5ಕ್ಕೆ ಹರಿಯಾಣ ವಿಧಾನಸಭಾ ಚುನಾವಣೆ ಮತದಾನ ಮುಂದೂಡಿಕೆ; ಚುನಾವಣಾ ಆಯೋಗ ಕೊಟ್ಟ ಕಾರಣ ಹೀಗಿದೆ…

Untitled-design-16-2
Published on

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯು ಅಕ್ಟೋಬರ್​ 1 ಬದಲಿಗೆ ಅಕ್ಟೋಬರ್​ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ (ಆಗಸ್ಟ್​​ 31) ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ಮೂರನೇ ಹಂತದ ಮತದಾನದ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಕ್ಟೋಬರ್​ 1 ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನ ನಡೆಯಲಿದೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಎರಡರ ಚುನಾವಣಾ ಫಲಿತಾಂಶವನ್ನು ಅಕ್ಟೋಬರ್​ 8 ಘೋಷಿಸಲಾಗುವುದು ಎಂದು ಹೇಳಿದೆ.

ಹರಿಯಾಣದಲ್ಲಿ ಮುಂಬರುವ ಉತ್ಸವದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಬಿಷ್ಣೋಯ್ ಸಮುದಾಯದ ಮತದಾನದ ಹಕ್ಕು ಮತ್ತು ಅವರ ಸಂಪ್ರದಾಯಗಳಿಗೆ ಗೌರವವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮತದಾನದ ದಿನಾಂಕವನ್ನು ಬದಲಾಯಿಸುವಂತೆ ರಾಜಸ್ಥಾನದ ಅಖಿಲ ಭಾರತ ಬಿಷ್ಣೋಯ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

ಹಲವು ತಲೆಮಾರುಗಳಿಂದ ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದಲ್ಲಿನ ಹಲವು ಕುಟುಂಬಗಳು ಗುರು ಜಂಭೇಶ್ವರರ ಸ್ಮರಣಾರ್ಥ ಶತಮಾನಗಳಿಂದ ಅಸೋಜ ಅಮವಾಸ್ಯೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಅಕ್ಟೋಬರ್​ 2ರಂದು ಈ ಹಬ್ಬ ಬರುತ್ತದೆ. ಸಿರ್ಸಾ, ಫತೇಹಾಬಾದ್ ಮತ್ತು ಹಿಸಾರ್‌ನಿಂದ ಸಾವಿರಾರು ಬಿಷ್ಣೋಯ್ ಕುಟುಂಬಗಳು ಮತದಾನದ ದಿನದಂದು ರಾಜಸ್ಥಾನಕ್ಕೆ ಪ್ರಯಾಣಿಸಲಿದ್ದಾರೆ. ಈ ಕಾರಣದಿಂದಾಗಿ ಅವರು ಅಕ್ಟೋಬರ್ 1 ರಂದು ಮತದಾನ ಮಾಡಲು ಸಾಧ್ಯವಾಗುವುದಿಲ್ಲ.

ಭಿವಾನಿ, ಹಿಸಾರ್, ಸಿರ್ಸಾ ಮತ್ತು ಫತೇಹಾಬಾದ್ ಜಿಲ್ಲೆಗಳು ಬಿಷ್ಣೋಯಿ ಪ್ರಾಬಲ್ಯದ ಗ್ರಾಮಗಳಾಗಿವೆ. ಇದರಲ್ಲಿ ಸುಮಾರು 1.5 ಲಕ್ಷ ಮತಗಳಿವೆ. ಅಕ್ಟೋಬರ್​ 1ರಂದು ಮತದಾನ ನಡೆದರೆ ಈ ಜನರ ಮತದಾನ ಹಕ್ಕನ್ನು ಕಸಿದುಕೊಳ್ಳುವಂತಾಗುತ್ತದೆ. ಇದರಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯು ಕಡಿಮೆಯಾಗಬಹುದು. ಈ ಕಾರಣಕ್ಕೆ ಮತದಾನದ ದಿನಾಂಕ ಮುಂದೂಡಿರುವುದಾಗಿ ಆಯೋಗ ತಿಳಿಸಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net