ನ್ಯೂಸ್

ಆಟವಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಬಾಲಕ ಮೃತ್ಯು!; ವಿದ್ಯುತ್ ಇಲಾಖೆಯನ್ನು ದೂರಿದ ಪೋಷಕರು

ಮೋಹನ್​ ಶೆಟ್ಟಿ

ಬಿಹಾರ: ರಸ್ತೆಯಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಹೈಟೆನ್ಷನ್ ತಂತಿ ತುಂಡಾಗಿ ಬಿದ್ದ ಪರಿಣಾಮ, ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟ ಘಟನೆ ಬಿಹಾರದ ಕತಿಹಾರ್‌ನಲ್ಲಿ ವರದಿಯಾಗಿದೆ.

ಘಟನೆ ಸಂಭವಿಸಿದ ಬೆನ್ನಲ್ಲೇ ಸ್ಥಳೀಯರು ಮತ್ತು ಪೋಷಕರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ವಿದ್ಯುತ್​ ಇಲಾಖೆಯ ಬೇಜವಾಬ್ದಾರಿಯೇ ತಮ್ಮ ಪುತ್ರನ ಸಾವಿಗೆ ಕಾರಣ ಎಂದು ಬಾಲಕನ ತಂದೆ-ತಾಯಿ ಆರೋಪಿಸಿದ್ದಾರೆ.

ಅನೇಕ ಬಾರಿ ಹೈಟೆನ್ಷನ್​ ತಂತಿ ರಸ್ತೆಗೆ ಬಿದ್ದಿದೆ. ಈ ಬಗ್ಗೆ ಎಷ್ಟು ಬಾರಿ ದೂರು ನೀಡಿದರೂ ಎಚ್ಚೆತ್ತುಕೊಳ್ಳದ ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಮತ್ತು ಬಾಲಕನ ಸಂಬಂಧಿಕರು ಆರೋಪಿಸಿದ್ದಾರೆ. ಘಟನೆಯಿಂದ ತೀವ್ರ ಕೆರಳಿದ ಸ್ಥಳೀಯರು, ಕತಿಹಾರ್-ಕೋಧಾ ರಾಷ್ಟ್ರೀಯ ಹೆದ್ದಾರಿ 81 ರಲ್ಲಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಪರಿಹಾರ ನೀಡುವಂತೆ ಒತ್ತಾಯಿಸಿದ ಪೋಷಕರು, ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು. ಕೂಡಲೇ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸರಕಾರ, ಪರಿಹಾರ ನೀಡುವುದಾಗಿ ಭರವಸೆ ನೀಡುವುದರ ಜತೆಗೆ ದೋಷಪೂರಿತ ವಿದ್ಯುತ್ ತಂತಿ ವ್ಯವಸ್ಥೆಯನ್ನು ವಿಳಂಬ ಮಾಡದೆ ಸರಿಪಡಿಸುವುದಾಗಿ ತಿಳಿಸಿತು,(ಏಜೆನ್ಸೀಸ್).