ಶ್ರೀನಗರ: ಇಂದು (ನ.11) ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್ಸಿಆರ್) ವ್ಯಾಪ್ತಿಯಲ್ಲಿ ಬರುವ ಫರಿದಾಬಾದ್‌ನಲ್ಲಿ ಬರೋಬ್ಬರಿ 350 ಕೆಜಿ ತೂಕದ ಅಮೋನಿಯಂ ನೈಟ್ರೇಟ್ (Ammonium Nitrate) ಮತ್ತು ಒಂದು ಎಕೆ-47 ರೈಫಲ್ ಸೇರಿದಂತೆ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಇದು ಆರ್ಡಿಎಕ್ಸ್ ಎಂದು ಹೇಳಲಾಗಿತ್ತು. ಆದರೆ, ನಂತರದಲ್ಲಿ ಸ್ಫೋಟಕ ಕೆಮಿಕಲ್ ಆದ ಅಮೋನಿಯಂ ನೈಟ್ರೇಟ್ ಎಂಬುದು ಸ್ಪಷ್ಟವಾಯಿತು.
ಅಧಿಕಾರಿಗಳ ಮಾಹಿತಿ ಪ್ರಕಾರ, ವಿಚಾರಣೆಯ ಸಂದರ್ಭದಲ್ಲಿ ಕಾಶ್ಮೀರದ ವೈದ್ಯ ಡಾ. ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿ ಆಧಾರದ ಮೇಲೆ ಈ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದಕ್ಕೂ ಮೊದಲು, ಪೊಲೀಸರು ಕಾಶ್ಮೀರ ಕಣಿವೆಯಲ್ಲಿ ವೈದ್ಯನಿಗೆ ಸೇರಿದ ಲಾಕರ್‌ನಿಂದ ಎಕೆ-47 ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇನ್ನು ಪುಲ್ವಾಮಾ ಜಿಲ್ಲೆಯ ಕೊಯಿಲ್ ನಿವಾಸಿಯಾಗಿರುವ ಶಕೀಲ್ ಅಹ್ಮದ್ ಗನೈ ಎಂಬುವರ ಪುತ್ರ ಮುಜಾಮಿಲ್ ಶಕೀಲ್ ಎಂದು ಗುರುತಿಸಲಾದ ಮತ್ತೊಬ್ಬ ವೈದ್ಯನ ಪಾತ್ರವು ಕೂಡ ಈ ಪ್ರಕರಣದಲ್ಲಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಇಂದು ದೇಶದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ಸಂಚನ್ನು ಪೊಲೀಸರು ಕಡೆಗೂ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿನದ್ದ ವೈದ್ಯನ ಮನೆಯಿಂದ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯನ ನಿವಾಸದಿಂದ ವಶಕ್ಕೆ ಪಡೆದ ಒಟ್ಟು ಅಮೋನಿಯಂ ನೈಟ್ರೇಟ್ ಪ್ರಮಾಣ 350 ಕೆಜಿ ಎಂದು ವರದಿಯಾಗಿದೆ. ಈ ಕಥೆಯಲ್ಲಿ ಅಮೋನಿಯಂ ನೈಟ್ರೇಟ್ ಎಂದರೇನು? ಇದರಿಂದ ಏನು ಮಾಡಬಹುದು? ಎಂಬುದರ ವಿವರ ಹೀಗಿದೆ ಗಮನಿಸಿ.
ಅಮೋನಿಯಂ ನೈಟ್ರೇಟ್ ಒಂದು ರಾಸಾಯನಿಕವಾಗಿದ್ದು, ಇದರಿಂದ ಸ್ಫೋಟಕಗಳನ್ನು ತಯಾರಿಸಲು ಬಳಸಲಾಗುತ್ತದೆ. ವಾಸ್ತವವಾಗಿ, ಭಾರತದಲ್ಲಿ ಈ ಹಿಂದೆ ಸಂಭವಿಸಿದ ಭಯೋತ್ಪಾದಕ ದಾಳಿಗಳಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ಬಳಸಲಾಗಿತ್ತು. ತನಿಖಾ ಸಂಸ್ಥೆಗಳು ಹಲವಾರು ಭಯೋತ್ಪಾದಕ ದಾಳಿ ಯೋಜನೆಗಳಲ್ಲಿ ಈ ಕೆಮಿಕಲ್ ಅನ್ನು ವಶಪಡಿಸಿಕೊಂಡಿವೆ. 2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿಯೂ ಉಗ್ರರು ಅಮೋನಿಯಂ ನೈಟ್ರೇಟ್ ಬಳಸಿದ್ದರು.
ಅಮೋನಿಯಂ ನೈಟ್ರೇಟ್ (NH₄NO₃) ಒಂದು ಸ್ಫಟಿಕದಂತಹ ರಾಸಾಯನಿಕ ಸಂಯುಕ್ತ. ಇದು ಬಣ್ಣರಹಿತ, ವಾಸನೆಯಿಲ್ಲದ ವಸ್ತು. ಈ ಕೆಮಿಕಲ್ ನೀರಿನಲ್ಲಿ ವೇಗವಾಗಿ ಕರಗುತ್ತದೆ. ಇದು ಅಮೋನಿಯಾ ಮತ್ತು ನೈಟ್ರಿಕ್ ಆಮ್ಲದ ಪ್ರತಿಕ್ರಿಯೆಯಿಂದ ಉತ್ಪತ್ತಿಯಾಗುವ ಸಂಶ್ಲೇಷಿತ ಪುಡಿಯಾಗಿದೆ. ಇದು ಜಾಗತಿಕವಾಗಿ ಹೆಚ್ಚುವರಿ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಶುದ್ಧ ಅಮೋನಿಯಂ ನೈಟ್ರೇಟ್ ಸ್ವತಃ ಸ್ಫೋಟಕವಲ್ಲ. ಇದನ್ನು ಬಾಂಬರ್ ಆಗಿ ಬಳಸಲು ಪ್ರಾಥಮಿಕ ಸ್ಫೋಟಕ, ಆರ್ಡಿಎಕ್ಸ್ ಅಥವಾ ಟಿಎನ್ಟಿನಂತಹ ಡಿಟೋನೇಟರ್ ಅಗತ್ಯವಿದೆ. ವಾಸ್ತವವಾಗಿ, ಇದು ಹೆಚ್ಚು ಸುಡುವಂತದ್ದು. ಇತರೆ ಸ್ಫೋಟಕದೊಂದಿಗೆ ಬೆರೆಸಿದರೆ ದೊಡ್ಡದಾಗಿ ಸ್ಫೋಟಗೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ಸಾಧಾರಣವಾಗಿ, ಅಮೋನಿಯಂ ನೈಟ್ರೇಟ್ ಅನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಇದನ್ನು ರಸಗೊಬ್ಬರಗಳಲ್ಲಿ ಸಾರಜನಕದ ಮೂಲವಾಗಿಯೂ ಬಳಸಲಾಗುತ್ತದೆ. ಗಣಿಗಾರಿಕೆ ಉದ್ಯಮದಲ್ಲಿ ಬಳಸುವ ಸ್ಫೋಟಕಗಳಲ್ಲಿ ಅಮೋನಿಯಂ ನೈಟ್ರೇಟ್ ಇರುತ್ತದೆ. ಈ ಕೆಮಿಕಲ್ಗೆ ಬೆಂಕಿ ಹೊತ್ತಿಕೊಂಡರೆ ಭಾರೀ ಪ್ರಮಾಣದಲ್ಲಿ ಸ್ಫೋಟಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಫೋಟವು ತುಂಬಾ ಶಕ್ತಿಶಾಲಿಯಾಗಿದ್ದು, ಸುತ್ತಮುತ್ತಲಿನ ವಸ್ತುಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ಸುಟ್ಟು ಭಸ್ಮವಾಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
150 ಕೆಜಿ ಅಮೋನಿಯಂ ನೈಟ್ರೇಟ್ ಎರಡರಿಂದ ಮೂರು ಕಿ.ಮೀ ಪ್ರದೇಶದಲ್ಲಿ ಸಂಪೂರ್ಣ ವಿನಾಶವನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಎಷ್ಟು ಕೆಜಿ ಬಳಕೆ ಎಂಬುದರ ಆಧಾರದ ಮೇಲೆ, ಈ ವಸ್ತುವಿನ ಸ್ಫೋಟ ಹಾಗೂ ಅದರ ಮಾರಕತೆಯನ್ನು ಅಂದಾಜು ಮಾಡಬಹುದು ಎಂದು ಹೇಳಲಾಗುತ್ತದೆ. ಅಕಸ್ಮಾತ್, ಇಂದು ಫರಿದಾಬಾದ್‌ನಲ್ಲಿ ಪತ್ತೆಯಾದ ಅಮೋನಿಯಂ ನೈಟ್ರೇಟ್ ಬೆಂಕಿಗೆ ಆಹುತಿಯಾಗಿದಿದ್ರೆ, ಕನಿಷ್ಠ ಆರು ಕಿ.ಮೀ. ವ್ಯಾಪ್ತಿಯವರೆಗೂ ಸ್ಫೋಟಗೊಂಡು, ಭಾರೀ ಹಾನಿಗೆ ಸಾಕ್ಷಿಯಾಗುತ್ತಿತ್ತು.
2020ರ ಬೈರುತ್ ಸ್ಫೋಟದ ಬೆನ್ನಲ್ಲೇ, ದೇಶದಲ್ಲಿ ಅಮೋನಿಯಂ ನೈಟ್ರೇಟ್ ಕಳ್ಳತನವನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿತು. ಅಗ್ನಿಶಾಮಕ ನಿಯಮಗಳನ್ನು ಜಾರಿಗೆ ತರಲು, ಈ ರಾಸಾಯನಿಕದ ನಿರ್ವಹಣೆ ಮತ್ತು ಸಂಗ್ರಹಣೆಯನ್ನು ಸುಧಾರಿಸಲು ಹಲವಾರು ರೂಲ್ಟ್ಗಳನ್ನು ತಿದ್ದುಪಡಿ ಮಾಡಲಾಯಿತು. ಹೊಸ ನಿಯಮಗಳ ಪ್ರಕಾರ, ಬಂದರುಗಳಿಗೆ ಆಮದು ಮಾಡಿಕೊಳ್ಳುವ ಅಮೋನಿಯಂ ನೈಟ್ರೇಟ್ ಅನ್ನು ಬಂದರು ಪ್ರದೇಶದಿಂದ ಕನಿಷ್ಠ 500 ಮೀ. ದೂರದಲ್ಲಿರುವ ಶೇಖರಣಾ ಸೌಲಭ್ಯಗಳಿಗೆ ವರ್ಗಾಯಿಸಬೇಕು ಮತ್ತು ಯಾವುದೇ ಸಂದರ್ಭಗಳಲ್ಲಿ ಬಂದರುಗಳಲ್ಲಿ ಸಂಗ್ರಹಿಸಬಾರದು.
ಇದಲ್ಲದೆ, ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಂಡರೆ, ಅದನ್ನು ಸುರಕ್ಷಿತ ಮತ್ತು ತ್ವರಿತ ವಿಲೇವಾರಿಗಾಗಿ ಹರಾಜು ಮಾಡಬಹುದು. ಸ್ಫೋಟಕ ಕೆಮಿಕಲ್ ಅನ್ನು ಚೀಲ ರೂಪದಲ್ಲಿ ಮಾತ್ರ ಆಮದು ಮಾಡಿಕೊಳ್ಳಬೇಕು. ಅದರ ಶೇಖರಣಾ ಪ್ರದೇಶದಲ್ಲಿ ಸಾಕಷ್ಟು ಅಗ್ನಿಶಾಮಕ ಸೌಲಭ್ಯಗಳನ್ನು ಮುಂಜಾಗ್ರತಾ ಕ್ರಮವಾಗಿ ಇರಿಸಬೇಕು ಎಂಬ ನಿಯಮಗಳಿವೆ,(ಏಜೆನ್ಸೀಸ್).