Coins Removed : ತುರ್ತು ಆಪರೇಷನ್ ಮಾಡಿ 33 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಸುಮಾರು 300 ರೂಪಾಯಿ ಮೌಲ್ಯದ 33 ನಾಣ್ಯಗಳನ್ನು ಹೊರತೆಗೆದ ಘಟನೆ ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ನಡೆದಿದೆ.
ಗುಮರ್ವಿನ್ ಮೂಲದ ವ್ಯಕ್ತಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಆತನ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು. ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ಒಳಗೆ ಲೋಹದ ವಸ್ತುಗಳು ಇರುವುದು ಕಂಡುಬಂತು. ಇದಾದ ನಂತರ ಎಂಡೋಸ್ಕೋಪಿ ನಡೆಸಲಾಯಿತು. ಆ ವ್ಯಕ್ತಿಯ ಹೊಟ್ಟೆಯು ನಾಣ್ಯಗಳಿಂದ ತುಂಬಿರುವುದು ಗೊತ್ತಾಯಿತು.
ನಾಣ್ಯಗಳಿರುವುದು ಪತ್ತೆಯಾದ ಬೆನ್ನಲ್ಲೇ ವ್ಯಕ್ತಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ವೈದ್ಯ ಅನುಷ್ಕ್ ಅವರು ಆಪರೇಷನ್ ಮಾಡಿ 33 ನಾಣ್ಯಗಳನ್ನು ಹೊರತೆಗೆದರು. ಆ ನಾಣ್ಯಗಳು ಒಟ್ಟು 247 ಗ್ರಾಂ ತೂಕವಿತ್ತು ಎಂದು ವೈದ್ಯರು ಹೇಳಿದ್ದಾರೆ. ಆ ವ್ಯಕ್ತಿಯ ಹೊಟ್ಟೆಯಿಂದ ಒಂದು, ಎರಡು, ಹತ್ತು ಮತ್ತು 20 ರೂಪಾಯಿ ನಾಣ್ಯಗಳನ್ನು ಹೊರತೆಗೆಯಲಾಗಿದೆ.
ಈ ಬಗ್ಗೆ ಮಾತನಾಡಿರುವ ವೈದ್ಯ ಅನುಷ್ಕ್, ಈ ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿತ್ತು. ಆ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ ಎಂದು ನಾವು ಭಾವಿಸಿದ್ದೆವು. ಅವನ ಹೊಟ್ಟೆ ಬಲೂನಿನಂತೆ ಊದಿತ್ತು. ಅವನ ಹೊಟ್ಟೆಯಾದ್ಯಂತ ನಾಣ್ಯಗಳು ಹರಡಿದ್ದವು. ಶಸ್ತ್ರಚಿಕಿತ್ಸೆಗೆ ಸುಮಾರು ಮೂರು ಗಂಟೆಗಳು ಬೇಕಾಯಿತು. ಆ ವ್ಯಕ್ತಿಗೆ ಸ್ಕಿಜೋಫ್ರೇನಿಯಾ ಎಂಬ ಕಾಯಿಲೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಚಿಕನ್ ಅಥವಾ ಮಟನ್ ಲಿವರ್ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver
ಇದೊಂದು ಮಾನಸಿಕ ರೋಗ. ರೋಗಿಯ ಆಲೋಚನೆಗಳು ಮತ್ತು ಮಾತು ವಾಸ್ತವಕ್ಕೆ ಸಂಬಂಧಿಸಿರುವುದಿಲ್ಲ. ಇತರರು ಸತ್ಯವನ್ನು ಅರ್ಥಮಾಡಿಸಲು ಪ್ರಯತ್ನಿಸಿದರೂ, ರೋಗಿಯು ಅದನ್ನು ಸ್ವೀಕರಿಸಲು ಸಿದ್ಧರಿರುವುದಿಲ್ಲ. ಈ ಸ್ಥಿತಿಯಿರುವ ಜನರು ತಮ್ಮ ಸುತ್ತಮುತ್ತಲಿನವರನ್ನು ನಂಬಲು ಸಿದ್ಧರಿರುವುದಿಲ್ಲ. (ಏಜೆನ್ಸೀಸ್)