ನ್ಯೂಸ್

ಎಲ್​ಒಸಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕ್​ ಸೇನೆ ಮೇಲೆ ಪ್ರತಿದಾಳಿ: ಕನಿಷ್ಠ ಮೂರು ಪಾಕ್ ಸೈನಿಕರ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನದ ಸೇನಾ ಪಡೆ ಅಪ್ರಚೋದಿತ ದಾಳಿ ನಡೆಸಿತ್ತು. ಕಳೆದ ಆರು ದಿನಗಳ ಅವಧಿಯಲ್ಲಿ ಪಾಕ್ ಸೇನೆ ನಡೆಸಿದ ಮೂರನೇ ಅಪ್ರಚೋದಿತ ದಾಳಿ ಇದಾಗಿತ್ತು. ಇದಕ್ಕೆ ಶುಕ್ರವಾರ ಬೆಳಗ್ಗೆ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ, ಸರಿಯಾದ ಉತ್ತರವನ್ನೇ ನೀಡಿತ್ತು.

ಮೂಲಗಳ ಪ್ರಕಾರ, ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ ಪಾಕಿಸ್ತಾನ ಸೇನೆಯ ಕನಿಷ್ಠ 3-4 ಸೈನಿಕರು ಮೃತಪಟ್ಟಿದ್ದಾರೆ. ಅಲ್ಲದೆ, ಐವರು ಗಂಭೀರ ಗಾಯಗೊಂಡಿದ್ದು, ನಾಲ್ಕು ಸೇನಾ ಪೋಸ್ಟ್​ಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ದಾಳಿ ಕುರಿತ ಇನ್ನಷ್ಟು ಮಾಹಿತಿ ಸಿಗಬೇಕಾಗಿದೆ.

ಇದಕ್ಕೂ ಮುನ್ನ, ಗುರುವಾರ ಪಾಕಿಸ್ತಾನ ಸೇನೆ ಪೂಂಛ್​ ವಲಯದ ಮೂರು ಸೇನಾ ಪೋಸ್ಟ್​ಗಳ ಮೇಲೆ ನಡೆಸಿದ ಶೆಲ್ ದಾಳಿಗೆ ಎಲ್​ಒಸಿಯಲ್ಲಿನ ಗ್ರಾಮಗಳ ಎರಡು ಮನೆಗಳು ಹಾನಿಗೀಡಾಗಿವೆ. ಒಬ್ಬ ನಾಗರಿಕ ಗಾಯಗೊಂಡಿದ್ದ. ಆತನನ್ನು ಕಸಬಾ ಗ್ರಾಮದ ನಿಸಾರ್ ಅಲಿ ಎಂದು ಗುರುತಿಸಲಾಗಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. (ಏಜೆನ್ಸೀಸ್)