ಅಯೋಧ್ಯೆ: ಸಾವು ಯಾವಾಗ? ಹೇಗೆ? ಬರುತ್ತದೆ ಎಂಬುದನ್ನು ಯಾರೂ ಕೂಡ ಊಹಿಸಲಾಗದು. ಈ ಯಾಂತ್ರಿಕ ಜಗತ್ತಿನಲ್ಲಿ ಯಾವುದು ಕೂಡ ಸುರಕ್ಷಿತವಲ್ಲ. ಸುಮ್ಮನೆ ಕುಳಿತಿದ್ದರು ಹಾಗೂ ನಮ್ಮ ಪಾಡಿಗೆ ಹೋಗುತ್ತಿದ್ದರೂ ಸಹ ಸಾವು ನಮ್ಮ ಅಲ್ಲಪಕ್ಕದಲ್ಲೇ ಇರುತ್ತದೆ ಎಂಬುದಕ್ಕೆ ಈ ಭಯಾನಕ ಘಟನೆಯೇ ತಾಜಾ ಉದಾಹರಣೆಯಾಗಿದೆ.
ತನ್ನ ಪಾಡಿಗೆ ಬೈಕ್ನಲ್ಲಿ ಹೋಗುತ್ತಿದ್ದ ಸವಾರನಿಗೆ ರಸ್ತೆ ದಾಟುತ್ತಿದ್ದ ನೀಲಗಾಯ್ ಡಿಕ್ಕಿ ಹೊಡೆದ ಪರಿಣಾಮ ಸವಾರ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಇನಾಯತ್ ನಗರ ವಾಪ್ತಿಯ ಮಿಥೆ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಯುವಕನನ್ನು ವಿಜಯಿ ಪಾಠಕ್ ಗ್ರಾಮದ ಸುರೇಂದ್ರ ನಾಥ್ ಪಾಂಡೆ ಅವರ ಪುತ್ರ ಮುಕೇಶ್ ಪಾಂಡೆ (28) ಎಂದು ಗುರುತಿಸಲಾಗಿದೆ. ಮುಕೇಶ್, ಇನಾಯತ್ ನಗರ ಮಾರುಕಟ್ಟೆಗೆ ತೆರಳುತ್ತಿದ್ದಾಗ ಮಿಥೆ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.
ವಿಡಿಯೋದಲ್ಲಿ ಏನಿದೆ? ಹೆದ್ದಾರಿಯಲ್ಲಿ ಯುವಕನೊಬ್ಬ ಬೈಕ್ ಓಡಿಸಿಕೊಂಡು ಹೋಗುವಾಗ ಅದೇ ಸಂದರ್ಭದಲ್ಲಿ ರಸ್ತೆದಾಟಲು ವೇಗವಾಗಿ ಬರುವ ನೀಲಗಾಯ್, ಬೈಕ್ ಬಳಿ ಬರುತ್ತಿದ್ದಂತೆ ಛಂಗನೇ ಜಿಗಿದು ಬೈಕ್ಗೆ ಡಿಕ್ಕಿ ಹೊಡೆಯುತ್ತದೆ. ಈ ವೇಳೆ ಸವಾರ ಹಾರಿ ಹೋಗಿ ರಸ್ತೆ ಮೇಲೆ ಬೀಳುತ್ತಾನೆ. ಇತ್ತ ನೀಲಗಾಯ್ ಸಹ ನೆಲಕ್ಕೆ ಅಪ್ಪಳಿಸುತ್ತದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ, ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದವು. ಡಿಕ್ಕಿಯ ರಭಸಕ್ಕೆ ನೀಲಗಾಯ್ ಕೊಂಬುಗಳು ಸವಾರನ ಎದೆಗೆ ಚುಚ್ಚಿದ ಪರಿಣಾಮ ಪರಿಸ್ಥಿತಿ ಗಂಭೀರವಾಗಿತ್ತು. ಸ್ಥಳೀಯರು ಮತ್ತು ದಾರಿಹೋಕರು ಗಾಯಗೊಂಡ ಬೈಕ್ ಸವಾರನನ್ನು ಕೂಡಲೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆದರೆ, ವೈದ್ಯರ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಿಸದೇ ಮುಕೇಶ್ ಕೊನೆಯುಸಿರೆಳೆದಿದ್ದಾರೆ. ನೀಲಗಾಯ್ ಸಹ ತನ್ನ ಪ್ರಾಣವನ್ನು ಕಳೆದುಕೊಂಡಿದೆ.
ಕಾನೂನು ಪ್ರಕ್ರಿಯೆಗಳ ಬಳಿಕ ಕೊತ್ವಾಲಿ ನಗರ ಠಾಣಾ ಪೊಲೀಸರು ಮುಕೇಶ್ ಶವವನ್ನು ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿದರು. ಸುಮಾರು ಐದು ವರ್ಷಗಳ ಹಿಂದೆ ಮದುವೆಯಾಗಿರುವ ಮುಕೇಶ್ ನಾಲ್ಕು ವರ್ಷದ ಪಿಹು ಎಂಬ ಮಗಳನ್ನು ಅಗಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್)