ನವದೆಹಲಿ: ಸಮುದ್ರದ ಗಡಿಯನ್ನು ಉಲ್ಲಂಘಿಸಿ ಅಕ್ರಮವಾಗಿ ಮೀನುಗಳ ಬೇಟೆಯಾಡಿದ ಆರೋಪದ ಮೇಲೆ ಭಾರತದ 27 ಮೀನುಗಾರರನ್ನು ಬಂಧಿಸಿರುವುದಾಗಿ ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ಶ್ರೀಲಂಕಾದ ಈಶಾನ್ಯದಲ್ಲಿರುವ ಮನ್ನಾರ್, ಉತ್ತರದಲ್ಲಿರುವ ಡೆಲ್ಫ್ ಮತ್ತು ಕಚ್ಚತೀವು ಸಮುದ್ರ ತೀರದಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮನ್ನಾರ್ನಲ್ಲಿ ಒಂದು ಟ್ರಾಲರ್ ಹಾಗೂ 15 ಮಂದಿ ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ. ಡೆಲ್ಫ್ ಮತ್ತು ಕಚ್ಚತೀವು ಸಮುದ್ರ ತೀರದಲ್ಲಿ ಒಂದು ಟ್ರಾಲ್ ಹಾಗೂ 12 ಮಂದಿ ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾದ ಸಂಬಂಧದಲ್ಲಿ ಮೀನುಗಾರರ ಬಂಧನ ವಿಚಾರ ದೊಡ್ಡ ಸಮಸ್ಯೆಯಾಗಿದ್ದು, ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ್ದಾರೆ. ಶ್ರೀಲಂಕಾದ ಸಮುದ್ರದ ಗಡಿಯನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪಾಕ್ ಜಲಸಂಧಿಯು ಭಾರತ ಹಾಗೂ ಶ್ರೀಲಂಕಾ ನಡುವಿನ ಜಲಗಡಿಯಾಗಿದ್ದು, ಎರಡು ದೇಶಗಳ ಮೀನುಗಾರರು ಇಲ್ಲಿ ಮೀನುಗಳನ್ನು ಹಿಡಿಯಲು ಬರುತ್ತಾರೆ. ಸಮುದ್ರದ ಗಡಿಯನ್ನು ಉಲ್ಲಂಘಿಸಿ ಮೀನುಗಳ ಬೇಟೆಯಾಡಿದ ಆರೋಪದ ಮೇಲೆ ಭಾರತದ ಮೀನುಗಾರರನ್ನು ಶ್ರೀಲಂಕಾದ ಅಧಿಕಾರಿಗಳು ಅನೇಕ ಬಾರಿ ಬಂಧಿಸಿದ್ದಾರೆ.