ನ್ಯೂಸ್

ಮುಂದಿನ ವರ್ಷ ದೇಶಾದ್ಯಂತ 24x 27 ವಿದ್ಯುತ್​ ಪೂರೈಕೆ; ಈಗ ದಿನಕ್ಕೆ ಎಷ್ಟು ಸಮಯ ಸರಬರಾಜು ಇದೆ?

ನವದೆಹಲಿ: ಭಾರತವು ಹೆಚ್ಚು ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುವುದರ ಜತೆಗೆ 2024ರಲ್ಲಿ ಎಲ್ಲರಿಗೂ 24x7 (ದಿನದ 24 ಗಂಟೆಗಳ ಕಾಲ) ವಿದ್ಯುತ್ ಪೂರೈಕೆಯನ್ನು ಸಾಧಿಸಲು ನವೀಕರಿಸಬಹುದಾದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವತ್ತ ಗಮನಹರಿಸುತ್ತಿದೆ. ಆರ್ಥಿಕ ವಿಸ್ತರಣೆ ಮತ್ತು ಇಂಧನ ಭದ್ರತೆ ಖಚಿತಪಡಿಸಿಕೊಳ್ಳಲು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಪ್ರಸ್ತುತ ಸಮಯದಲ್ಲಿ ಈ ಮಹತ್ವಾಕಾಂಕ್ಷೆಯ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇದಕ್ಕಾಗಿ ಕೇಂದ್ರ ವಿದ್ಯುತ್ ಸಚಿವಾಲಯವು 91 GW (ಗಿಗಾ ವ್ಯಾಟ್​) ಉತ್ಪಾದಿಸಲು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಉತ್ಪಾದನಾ ಯೋಜನೆಗಳಲ್ಲಿ ಮುಂದಿನ ಹಲವು ವರ್ಷಗಳಲ್ಲಿ 7.28 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ.

ಸುದ್ದಿ ಸಂಸ್ಥೆ ಜತೆ ಮಾತನಾಡಿದ ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್ ಕೆ ಸಿಂಗ್ ಅವರು "24X7 ವಿದ್ಯುತ್ ಪೂರೈಕೆ ಗ್ರಾಹಕರ ಹಕ್ಕು ಆಗಿದೆ. ಹಾಗೆಯೇ ಇಂಧನ ಭದ್ರತೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ರಷ್ಯಾ-ಯೂಕ್ರೇನ್ ಯುದ್ಧದ ಕಾರಣ ಯುರೋಪಿನಲ್ಲಿ ಏನಾಯಿತು ಎಂಬುದನ್ನು ನೀವು ನೋಡಿದ್ದೀರಿ" ಎಂದಿದ್ದಾರೆ.

ಪ್ರಸ್ತುತ, ಭಾರತದಾದ್ಯಂತ ಸರಾಸರಿ ವಿದ್ಯುತ್ ಸರಬರಾಜು ನಗರ ಪ್ರದೇಶಗಳಲ್ಲಿ 23.50 ಗಂಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 22 ಗಂಟೆ ಇದೆ.

ನಮ್ಮ ದೇಶದ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿರುವ ಸಮಯದಲ್ಲಿ ಯಾವುದೇ ಭೌಗೋಳಿಕ ರಾಜಕೀಯ ಅಡ್ಡಿಯಿಂದ ದೇಶ ಮತ್ತು ಇಂಧನ ಭದ್ರತೆಯನ್ನು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್​ ಸಾಮರ್ಥ್ಯವು ಖಚಿತಪಡಿಸುತ್ತದೆ ಎಂದು ಸಿಂಗ್ ಹೇಳಿದರು.

ಸೆಪ್ಟೆಂಬರ್ 2023ರಲ್ಲಿ ವಿದ್ಯುತ್ ಬೇಡಿಕೆಯು ದೇದಲ್ಲಿ ಸಾರ್ವಕಾಲಿಕ ಗರಿಷ್ಠ (243.27 GW) ಮಟ್ಟದಲ್ಲಿತ್ತು. ಹೀಗಾಗಿ, ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ ಕಲ್ಲಿದ್ದಲು ಆಧಾರಿತ ಸಾಮರ್ಥ್ಯ ಹೆಚ್ಚಿಸುವುದು ಕೂಡ ಮುಖ್ಯವಾಗಿದೆ ಎಂದರು.