ನವದೆಹಲಿ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ ಕಾನೂನು) ಮರುಪರಿಶೀಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬೇರೆ ಬೇರೆ ರಾಜ್ಯದಲ್ಲಿ ದಾಖಲಾಗಿರುವ ದೇಶದ್ರೋಹ ಪ್ರಕರಣಗಳನ್ನು ತಡೆಯಲ್ಲಿಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡುತ್ತದೆಯೇ ಎಂಬ ಬಗ್ಗೆ 24 ಗಂಟೆಗಳ ಒಳಗಾಗಿ ನಿರ್ಧಾರ ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಮಧ್ಯೆ, ಇದೇ ವಿಷಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸೆಕ್ಷನ್ 124ಎ ಮರುಪರಿಶೀಲನೆ ನಡೆಸಿದ ಬಳಿಕ ನಡೆಸುವಂತೆ ಕೇಳಿದ್ದ ಕೇಂದ್ರದ ಮನವಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಇದಕ್ಕೂ ಮುನ್ನ, ದೇಶದ್ರೋಹ ಕಾನೂನನ್ನು ಮರುಪರಿಶೀಲಿಸಲು ಕೇಂದ್ರಕ್ಕೆ ಎಷ್ಟು ಸಮಯ ಬೇಕು ಮತ್ತು ಅದರ ದುರುಪಯೋಗವನ್ನು ತಡೆಯುವ ಬಗೆ ಹೇಗೆ ಎಂದು ಹೇಗೆ ಪರಿಹರಿಸುತ್ತದೆ ಎಂದು ನ್ಯಾಯಪೀಠ ಪ್ರಶ್ನಿಸಿತ್ತು. ಇದಕ್ಕುತ್ತರಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬ್ರಿಟಿಷರ ಕಾಲದ ಶಾಸನವನ್ನು ಮರುಪರಿಶೀಲಿಸಲಾಗುತ್ತಿದೆ. ಎಷ್ಟು ಸಮಯ ಹಿಡಿಯಲಿದೆ ಈಗಲೇ ಹೇಗೆ ಹೇಳಲು ಸಾಧ್ಯ ಎಂದರು. ಈ ವೇಳೆ, ಮೂರು-ನಾಲ್ಕು ತಿಂಗಳಲ್ಲಿ ಮರುಪರಿಶೀಲನೆಯ ಕಾರ್ಯವನ್ನು ಪೂರ್ಣಗೊಳಿಸಬಹುದು ಮತ್ತು ಅಲ್ಲಿಯವರೆಗೆ ಐಪಿಸಿಯ 124 ಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ತಡೆಯಲ್ಲಿಡುವ ಬಗ್ಗೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು.
ಅಲ್ಪಸಂಖ್ಯಾತ ಕೇಂದ್ರದ ವಿರುದ್ಧ ಗರಂ: ಸಮುದಾಯಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಅಧಿಕಾರ ಇರುವುದು ರಾಜ್ಯಕ್ಕೋ ಕೇಂದ್ರ ಸರ್ಕಾರಕ್ಕೋ ಎಂಬ ವಿಷಯದ ಮೇಲೆ ಕೇಂದ್ರ ಸರ್ಕಾರ ಪದೇ ಪದೇ ನಿಲುವುಗಳನ್ನು ಬದಲಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ರಾಜ್ಯಗಳ ಜತೆ 3 ತಿಂಗಳಲ್ಲಿ ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಸೂಚಿಸಿದೆ. ಹಿಂದುಗಳ ಜನಸಂಖ್ಯೆ ಕಡಿಮೆ ಇರುವ ಸುಮಾರು 10 ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಕೆಲ ದಿನಗಳ ಹಿಂದೆ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ರಾಜ್ಯಗಳೂ ಕೂಡ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರುತಿಸಿ ಮಾನ್ಯತೆ ನೀಡಬಹುದು ಎಂದು ಸಚಿವಾಲಯ ್ನ ಅಫಿಡವಿಟ್ನಲ್ಲಿ ಹೇಳಿತ್ತು. ಆದರೆ, ಇದಾದ ಎರಡು ತಿಂಗಳಲ್ಲಿ ತನ್ನ ನಿಲುವು ಬದಲಿಸಿ, ಕೇಂದ್ರ ಸರ್ಕಾರಗಳಿಗೆ ಮಾತ್ರ ಈ ಅಧಿಕಾರ ಇರುವುದಾಗಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಈ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಎಲ್ಲರೊಂದಿಗೂ ದೀರ್ಘ ಸಮಾಲೋಚನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ನ್ಯಾಯಪೀಠ, ‘ನೀವು ನಿಮ್ಮ ಹಿಂದಿನ ನಿಲುವಿನಿಂದ ಯು-ಟರ್ನ್ ತೆಗೆದುಕೊಂಡಿರುವಂತೆ ತೋರುತ್ತಿದೆ. ಏನು ಮಾಡಬೇಕೆಂದು ನಿರ್ಧರಿಸಲು ನಿಮಗೆ ಸಾಧ್ಯವಾಗುತ್ತಿಲ್ಲ. ರಾಜ್ಯಗಳ ಜತೆ ಸಮಾಲೋಚಿಸಲು ಬಯಸಿದ್ದರೆ, ನಿಮ್ಮನ್ನು ತಡೆದವರು ಯಾರು?’ ಎಂದು ವಾಗ್ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಮಾಲೋಚನೆ ನಡೆಸಲು 3 ತಿಂಗಳ ಕಾಲಾವಕಾಶ ನೀಡಬೇಕೆಂಬ ಮನವಿಗೆ ಸಮ್ಮತಿಸಿದೆ. ಒಪ್ಪಿದೆ. ಆ. 30ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.