ಬೆಂಗಳೂರು: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಯಮ, ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕೆಲವೊಂದು ನಿರ್ಬಂಧ ವಿಧಿಸುವ ಜತೆಗೆ ವಿಶೇಷ ನಿಗಾ ಕೂಡ ಇರಿಸಲಾಗಿದೆ. ಈ ನಡುವೆಯೇ ಇವತ್ತೊಂದೇ ದಿನ ರಾಜ್ಯದಲ್ಲಿ 23 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಭಾರತಕ್ಕೆ ಮೊದಲ ಒಮಿಕ್ರಾನ್ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!
ಜಗತ್ತಿನಾದ್ಯಂತ ಕೆಲವು ದಿನಗಳಿಂದ ಹಾವಳಿ ಇಡುತ್ತ ಹಲವಾರು ದೇಶಗಳಿಗೂ ವ್ಯಾಪಿಸಿರುವ ಒಮಿಕ್ರಾನ್ ಭಾರತದಲ್ಲೇ ಮೊದಲ ಬಾರಿಗೆ ಅದೂ ಬೆಂಗಳೂರಿನಲ್ಲೇ ದೃಢಪಟ್ಟಿತ್ತು. ಇದೇ ಡಿ. 2ರಂದು ಬೆಂಗಳೂರಿನಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಮೂಲಕ ಭಾರತಕ್ಕೆ ಹೊಸ ವೇರಿಯಂಟ್ನ ಅಧಿಕೃತ ಪ್ರವೇಶವಾಗಿತ್ತು.
ಆ ಬಳಿಕ ಹೆಚ್ಚುತ್ತಲೇ ಬಂದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ನಿನ್ನೆಗೆ 43ಕ್ಕೆ ತಲುಪಿತ್ತು. ಆದರೆ ಇವತ್ತೊಂದೇ ದಿನ ರಾಜ್ಯದಲ್ಲಿ 23 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 19 ಸೋಂಕಿತರು ವಿದೇಶದಿಂದ ಬಂದವರಾಗಿದ್ದಾರೆ. ಈ ಮೂಲಕ ದೃಢೀಕೃತ ಪ್ರಕರಣಗಳ ಒಟ್ಟು ಸಂಖ್ಯೆ 66ಕ್ಕೆ ತಲುಪಿದೆ. ಅದರಲ್ಲೂ ಕಳೆದ 28 ದಿನಗಳಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.