ರಾಯ್ಪುರ್: ನಿನ್ನೆ ಚತ್ತೀಸ್ಗಢದ ಬಿಜಾಪುರ ಜಿಲ್ಲೆಯ ಸಿಲಗುರ್ ಅರಣ್ಯ ವಲಯದಲ್ಲಿ ಸಿಆರ್ಪಿಫ್ ಯೋಧರು ಹಾಗೂ ಮಾವೋವಾದಿಗಳ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇದುವರೆಗೆ 22 ಯೋಧರು ಹುತಾತ್ಮರಾಗಿರುವುದು ಖಚಿತವಾಗಿದೆ.
ದಾಳಿ ನಡೆದ ಸಂದರ್ಭದಲ್ಲಿ ಐವರು ಯೋಧರು ಮೃತಪಟ್ಟಿದ್ದರು. 30 ಕ್ಕೂ ಹೆಚ್ಚು ಯೋಧರು ಕಾಣೆಯಾಗಿದ್ದರು. ಇಂದು 17 ಯೋಧರ ಮೃತದೇಹಗಳು ಪತ್ತೆಯಾಗಿರುವುದರಿಂದ ಒಟ್ಟು 22 ಯೋಧರು ದಾಳಿಯಲ್ಲಿ ಹುತಾತ್ಮರಾದಂತಾಗಿದೆ. ಇನ್ನೂ 8 ಯೋಧರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಭೀಕರ ದಾಳಿಯಲ್ಲಿ 5 ಕ್ಕಿಂತ ಹೆಚ್ಚು ಮಾವೋವಾದಿಗಳೂ ಹತರಾಗಿದ್ದು, 30 ಯೋಧರಿಗೆ ಗಾಯಗಳಾಗಿವೆ. ಗಂಭೀರ ಗಾಯಗಳಾದ 10 ಯೋಧರನ್ನು ರಾಯ್ಪುರ್ದ ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಭದ್ರತಾ ಸಿಬ್ಬಂದಿಯ ಸಾವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಖಂಡಿಸಿದ್ದಾರೆ. ಶಾಂತಿ ಮತ್ತು ಅಭಿವೃದ್ಧಿಯ ಶತ್ರುಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ನಕ್ಸಲರಿಗೆ ಷಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿಯು ಸಹ ಗಾಯಗೊಂಡ ಭದ್ರತಾ ಸಿಬ್ಬಂದಿಯ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಅಲ್ಲದೆ, ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಮಡಿದ ಯೋಧರ ಕುಟುಂಬದ ಜತೆ ನಾವಿರುತ್ತೇವೆಂದು ಟ್ವೀಟ್ ಮೂಲಕ ಧೈರ್ಯ ತುಂಬಿದ್ದಾರೆ.