ಶ್ರೀನಗರ: ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಂಪುರ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಕದಮ ವಿರಾಮ ಉಲ್ಲಂಘಿಸಿ ನಿರಂತರವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ಹುತಾತ್ಮರಾಗಿದ್ದಾರೆ. ಮತ್ತೊರ್ವ ಯೋಧ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಾಪಿ ಪಾಕ್ ಸೇನೆ ಕದಮ ವಿರಾಮ ಉಲ್ಲಂಘಿಸಿದೆ. ಕರೊನಾ ಲಾಕ್ಡೌನ್ನಂತಹ ವಿಷಮ ಸ್ಥಿತಿಯಲ್ಲೂ ತನ್ನ ನರಿಬುದ್ಧಿ ಬಿಡದ ಪಾಕ್ ಈಗಾಗಲೇ ಸಾಕಷ್ಟು ಬಾರಿ ಕದಮ ವಿರಾಮ ಉಲ್ಲಂಘನೆ ಮಾಡಿ ವಿಷ ಕಾರಿದೆ. ಇದಕ್ಕೆ ಭಾರತೀಯ ಸೇನೆಯು ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.
ಇದನ್ನೂ ಓದಿ: ಮೂರು ವಾರಗಳಿಂದ ಕಾಣೆಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಿಢೀರ್ ಪ್ರತ್ಯಕ್ಷ: ಏನಾಗಿತ್ತು ಕಿಮ್ಗೆ?
ಮೇ 1ರ ಬೆಳಗ್ಗೆ 3:30ರ ಸುಮಾರಿಗೆ ಬಾರಾಮುಲ್ಲಾ ಜಿಲ್ಲೆಯ ರಾಂಪುರ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿನ ನಡೆಸಿದೆ, ಇದಕ್ಕೆ ನಮ್ಮ ಸೇನೆ ಕೂಡ ತಕ್ಕ ಉತ್ತರ ನೀಡಿದೆ ಎಂದು ಭದ್ರತಾ ಪಡೆ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಹೇಳಿಕೆ ನೀಡಿದ್ದಾರೆ.
ಏಪ್ರಿಲ್ 30ರಲ್ಲೂ ಸಹ ಪಾಕ್ ಅಪ್ರಚೋದಿತ ಕದಮ ವಿರಾಮ ಉಲ್ಲಂಘನೆ ಮಾಡಿ, ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡಿನ ದಾಳಿ ನಡೆಸಿದೆ. ಸಣ್ಣ ಆಯುಧಗಳಿಂದ ಫೈರಿಂಗ್ ಮಾಡುತ್ತಿರುವುದಲ್ಲದೇ ಸಣ್ಣ ಪಿರಂಗಿಗಳಿಂದಲೂ ದಾಳಿ ಮಾಡುವ ಯತ್ನಕ್ಕೆ ಪಾಕ್ ಕೈ ಹಾಕಿದೆ. ಮೊದಲೇ ಆರ್ಥಿಕವಾಗಿ ದಿವಾಳಿ ಆಗಿರುವ ಪಾಕ್ಗೆ ಕರೊನಾ ಮತ್ತಷ್ಟು ಬಲವಾದ ಹೊಡೆತ ನೀಡಿದರೂ ಸಹ ತನ್ನ ಕುಂತಂತ್ರ ಬುದ್ಧಿಯನ್ನು ನಿಲ್ಲಿಸದಿರುವುದು ಆ ದೇಶ ದುರಾದೃಷ್ಟವಾಗಿದೆ. (ಏಜೆನ್ಸೀಸ್)