ನ್ಯೂಸ್

ಈ 2 ಶ್ರೀಮಂತ ರಾಷ್ಟ್ರಗಳಲ್ಲಿ ಕರೊನಾ ಕೇಸ್​ ಹೆಚ್ಚಿದ್ರೂ ಮರಣ ಪ್ರಮಾಣ ಮಾತ್ರ ತುಂಬಾ ಕಡಿಮೆ ಏಕೆ?

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಮೃತ್ಯಕೂಪಕ್ಕೆ ಜಾಗತಿಕವಾಗಿ 2.50 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೀಗಿರುವಾಗ ಈ ಎರಡು ಪುಟ್ಟ ರಾಷ್ಟ್ರಗಳಲ್ಲಿ ಕರೊನಾ ಪ್ರಕರಣ ಹೆಚ್ಚಿದ್ದರೂ ಮರಣ ಪ್ರಮಾಣ ದರ ತುಂಬಾ ಕಡಿಮೆ ಇರುವುದು ತೀವ್ರ ಕುತೂಹಲ ಮೂಡಿಸಿದೆ.

ಆ ಎರಡು ರಾಷ್ಟ್ರಗಳೇ ಕತಾರ್​ ಮತ್ತು ಸಿಂಗಾಪುರ​. ಉಭಯ ರಾಷ್ಟ್ರಗಳಲ್ಲಿ ಕರೊನಾ ಮರಣ ಪ್ರಮಾಣ ದರ ಶೇ. 0.1 ಕ್ಕಿಂತಲೂ ಕಡಿಮೆ ಇದೆ. ಸಿಂಗಾಪುರದಲ್ಲಿರುವ ವಿದೇಶಿ ಕಾರ್ಮಿಕರ ವಸತಿ ನಿಲುಯಗಳಲ್ಲಿ ಏಕಾಏಕಿ ಸ್ಪೋಟಗೊಂಡ ಕರೊನಾ ವೈರಸ್​ ಇಡೀ ರಾಷ್ಟ್ರಕ್ಕೆ ಹಬ್ಬಿದ್ದು, ಏಷ್ಯಾದ ಹೆಚ್ಚು ಕರೊನಾ ಪ್ರಕರಣ ರಾಷ್ಟ್ರಗಳಲ್ಲಿ ಇದು ಕೂಡ ಸೇರಿಕೊಂಡಿದೆ. ಆದರೆ, ಮರಣ ಪ್ರಮಾಣ ಮಾತ್ರ ತುಂಬಾ ಕಡಿಮೆ. ಗಮನಾರ್ಹವೆಂದರೆ, ವಯಸ್ಸಾದವರೇ ಕರೊನಾಗೆ ತುತ್ತಾಗುತ್ತಿರುವ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಕಳೆದ ವೀಕೆಂಡ್​ನಲ್ಲಿ 102 ವರ್ಷದ ಹಿರಿಯ ಮಹಿಳೆಯೊಬ್ಬರು ಕರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಪರಿಣಿತರು ಹೇಳುವ ಪ್ರಕಾರ ಎರಡು ರಾಷ್ಟ್ರಗಳಲ್ಲಿ ಮರಣ ಪ್ರಮಾಣ ದರ ಕಡಿಮೆಯಾಗಲು ರೋಗಿಗಳ ಸಂಖ್ಯೆ ಮತ್ತು ಅವರನ್ನು ನಿಭಾಯಿಸಲು ಇರುವ ಸಮರ್ಥ ಆರೋಗ್ಯ ರಕ್ಷಣಾ ವ್ಯವಸ್ಥೆ ಎಂದಿದ್ದಾರೆ.

ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾದ ಕತಾರ್​ನಲ್ಲಿ ಮರಣ ಪ್ರಮಾಣ ಶೇ. 0.07 ರಷ್ಟಿದೆ. ಒಟ್ಟು 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದರೂ ಮರಣ ಸಂಖ್ಯೆ ಮಾತ್ರ ಕೇವಲ 12 ಇದೆ. ಇನ್ನು ಸಿಂಗಾಪುರದಲ್ಲಿ ಮರಣ ಪ್ರಮಾಣ ದರ ಶೇ. 0.093 ರಷ್ಟಿದೆ. 19 ಸಾವಿರಕ್ಕೂ ಕೇಸ್​ಗಳು ಕಂಡುಬಂದಿದ್ದರೂ ಸಾವಿನ ಸಂಖ್ಯೆ ಮಾತ್ರ 18 ಇದೆ. ಎರಡೂ ದೇಶಗಳು ತಮ್ಮ ಜನಸಂಖ್ಯೆಯ ಅನುಗುಣವಾಗಿ ವೈರಸ್‌ ಮರಣ ಪ್ರಮಾಣವನ್ನು ಕಡಿಮೆ ಮಾಡಿವೆ. 1 ಲಕ್ಷ ಮಂದಿಗೆ ಶೇ. 0.5ಕ್ಕಿಂತಲೂ ಮರಣ ಪ್ರಮಾಣ ಕಡಿಮೆ ಇದೆ.

ವಿಶ್ವದಲ್ಲೇ ಸಂಪತ್ಭರಿತ ರಾಷ್ಟ್ರಗಳೆಂಬ ಕೀರ್ತಿಗೆ ಕತಾರ್​-ಸಿಂಗಾಪುರ​ ಭಾಜನವಾಗಿವೆ. ಹೀಗಾಗಿ ಉತ್ತಮ ಟೆಸ್ಟಿಂಗ್​ ಕಿಟ್ಸ್​ ಮತ್ತು ಆಸ್ಪತ್ರೆ ಬೆಡ್​ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿದ್ದಾರೆ ಎಂಬುದು ಅನೇಕ ಪರಿಣಿತರ ಮಾತಾಗಿದೆ. (ಏಜೆನ್ಸೀಸ್​)