ಮುಂಬೈ: ಜನುಮದಿನದಂದೆ ಯುವಕನನ್ನು ಆತನ ಸ್ನೇಹಿತರೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಮುಂಬೈನ ಗೋವಂಡಿ ಎಂಬ ಪ್ರದೇಶದಲ್ಲಿ ನಡೆದಿದೆ. ಬಿಲ್ ನೀಡುವ ವಿಚಾರವಾಗಿ ಗುಂಪಿನಲ್ಲಿ ಜಗಳ ಏರ್ಪಟ್ಟಿದ್ದು ಒಬ್ಬರ ದಾರುಣ ಅಂತ್ಯದಲ್ಲಿ ಕೊನೆಗೊಂಡಿದೆ.
ಮೃತ ದುರ್ದೈವಿಯನ್ನು ಶಬ್ಬೀರ್ ಅನ್ಸಾರಿ(18) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಮುಂಬೈನ ಶಿವಾಜಿನಗರ ಪೊಲೀಸರು ಇಬ್ಬರು ಅಪ್ರಾಪ್ತ ವಯಸ್ಕರ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ಧಾರೆ. ಬಂಧಿತರನ್ನು ಶಾರುಖ್(19), ನಿಶಾರ್(22) ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಾಜಿನಗರ ಪೊಲೀಸ್ ಠಾಣೆಯ ಅಧಿಕಾರಿ ಒಬ್ಬರು ಘಟನೆಯೂ ಮೇ 31ರಂದು ನಡೆದಿದ್ದು ಮೃತ ಯುವಕ ತನ್ನ ಜನ್ಮದಿನದ ಪ್ರಯುಕ್ತ ಸ್ನೇಹಿತರಿಗಾಗಿ ಢಾಭಾದಲ್ಲಿ ಪಾರ್ಟಿ ಆಯೋಜಿಸಿದ್ದ. ಈ ವೇಳೆ ಬಿಲ್ ಶೇರ್ ಮಾಡಿಕೊಳ್ಳುವಂತೆ ಮೃತ ಯುವಕ ತನ್ನ ಸ್ನೇಹಿತರ ಬಳಿ ಹೇಳಿದ್ದಾನೆ.
ಇದಕ್ಕೊಪ್ಪದ ಆತನ ಸ್ನೇಹಿತರು ಮೊದಲಿಗೆ ಜಗಳ ತೆಗೆದಿದ್ದಾರೆ. ಬಳಿಕ ಬಿಲ್ ತಾನೇ ಪಾವತಿಸುವುದಾಗಿ ಹೇಳಿ ಯುವಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಆರೋಪಿಗಳು ಸಂತ್ರಸ್ತನನ್ನು ಕೇಕ್ ಕಟ್ ಮಾಡಿಸುವ ನೆಪದಲ್ಲಿ ಕರೆಸಿಕೊಂಡು ಆತನ ಮೇಲೆ ದಾಳಿ ಮಾಡಿ ಮನಸೋಇಚ್ಛೆ ಚಾಕುವಿನಿಂದ ಇರಿದಿದ್ಧಾರೆ.
ಕೇಕ್ ಕಟ್ ಮಾಡುವ ಚಾಕುವಿನಿಂದ ಇರಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ಅಪ್ರಾಪ್ತ ವಯಸ್ಕರ ಮೊದಲಿಗೆ ಪೊಲೀಸರಿಗೆ ಶರಣಾಗಿದ್ದಾರೆ. ಆ ನಂತರ ಉತ್ತರಪ್ರದೇಶ ಮೂಲದ ಇಬ್ಬರನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ಅಂತಿಮ್ ಚಿತ್ರವೇ ಇವರಿಗೆ ಕೊಲೆ ಮಾಡಲು ಸ್ಪೂರ್ತಿ ಎಂದು ಹೇಳಿದ್ದಾರೆ. ಅಪ್ರಾಪ್ತ ವಯಸ್ಕರರನ್ನು ಬಾಲ ಅಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದ್ದು ಇನ್ನಿಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ಧಾರೆ.