ಬೀಜಿಂಗ್: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ 23 ಕಾರ್ಮಿಕರ ಪೈಕಿ 18 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಣಿಯಲ್ಲಿ ಕಾರ್ಬನ್ ಮೊನೋಕ್ಸೈಡ್ ಪ್ರಮಾಣ ಹೆಚ್ಚಾಗಿದ್ದೇ ಇದಕ್ಕೆ ಕಾರಣ ಚೀನಾದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಚಾಂಗ್ಖಿಂಗ್ ಮುನ್ಸಿಪಾಲಿಟಿಯ ಯಾಂಗ್ಚುವಾನ್ ಜಿಲ್ಲೆಯಲ್ಲಿರುವ ಡಿಯೋಶುಯಿಡಂಗ್ ಎಂಬಲ್ಲಿರುವ ಗಣಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕ ರಕ್ಷಣೆಗೆ ಅಗ್ನಿಶಾಮಕ ಸೇವೆ ಮತ್ತು ಪೊಲೀಸರು ಅವಿರತ ಶ್ರಮವಹಿಸಿ ಪರಿಹಾರ ಕಾರ್ಯಾಚರಣೆ ನಡೆಸಿದ್ದರು. ಆದರೂ, 18 ಜನರ ಪ್ರಾಣ ರಕ್ಷಿಸುವುದು ಅವರಿಂಧ ಸಾಧ್ಯವಾಗಲಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನುವಾ ನ್ಯೂ ಏಜೆನ್ಸಿ ವರದಿ ಮಾಡಿದೆ.
ಈ ಕಲ್ಲಿದ್ದಲು ಗಣಿ 1975ರಲ್ಲಿ ಸ್ಥಾಪಿಸಲ್ಪಟ್ಟಿದ್ದು, 1998ರಲ್ಲಿ ಖಾಸಗೀಕರಣಗೊಂಡಿತ್ತು. ಇಲ್ಲಿ ವಾರ್ಷಿಕ 1.20 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಇದೆ ಎಂದು ಸ್ಥಳೀಯ ತುರ್ತುಪರಿಸ್ಥಿತಿ ನಿರ್ವಹಣೆ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ಹೈಡ್ರೋಜನ್ ಸಲ್ಫೈಡ್ ವಿಷಾನಿಲದಿಂದಾಗಿ 2013ರ ಮಾರ್ಚ್ ತಿಂಗಳಲ್ಲಿ ಮೂವರು ಮೃತ್ತಪಟ್ಟು ಇಬ್ಬರು ಗಾಯಗೊಂಡಿದ್ದರು ಎಂಬುದನ್ನೂ ವರದಿ ನೆನಪಿಸಿದೆ. (ಏಜೆನ್ಸೀಸ್)