ನ್ಯೂಸ್

130 ವರ್ಷ ಹಳೆಯ ಶಾಲೆಗೆ ಬೇಕಿದೆ ಸಹಾಯಹಸ್ತ: ನಡೆದಾಡುವ ಜಾಗದಲ್ಲೇ ಮಕ್ಕಳಿಗೆ ಪಾಠ, ಶಿಕ್ಷಕಿ ಕಣ್ಣೀರು

ಮೋಹನ್​ ಶೆಟ್ಟಿ

ಜಾರ್ಖಂಡ್​: ಇಲ್ಲಿನ 130 ವರ್ಷ ಹಳೆಯ ಶಾಲೆಯೊಂದರ ಕಟ್ಟಡ ಧ್ವಂಸಗೊಂಡಿದ್ದು, ಮಕ್ಕಳು ಮೂಲಭೂತ ಸೌಕರ್ಯ ಸಿಗದೆ ಹಾಗೂ ನಡೆದಾಡುವ ಅಂಗಳದಲ್ಲಿ ಪಾಠ ಕೇಳುವ ದುಸ್ಥಿತಿ ನೆನೆದು ಶಾಲೆಯ ಶಿಕ್ಷಕಿ ಕಣ್ಣೀರಿಟ್ಟಿದ್ದಾರೆ. 130 ವರ್ಷಗಳ ಇತಿಹಾಸ ಹೊಂದಿರುವ ಈ ಸ್ಕೂಲ್​ನ ಗೋಡೆಗಳು ಕುಸಿದಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಶಾಲೆಗೆ ಹಾಜರಾಗುತ್ತಾರೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿರುವ ಈ ಶಾಲೆ ಇದೀಗ ಅಳಿವಿನಂಚಲ್ಲಿರುವುದು ತೀರ ಶೋಚನೀಯ.

ಜಾರ್ಖಂಡ್ ಸರ್ಕಾರವು 2019ರಲ್ಲಿ ಆರು ತರಗತಿ ಕೊಠಡಿಗಳನ್ನು ನೆಲಸಮಗೊಳಿಸಿದ್ದು, ಅವುಗಳನ್ನು ಮರುನಿರ್ಮಾಣ ಮಾಡುವ ಭರವಸೆ ನೀಡಿ, ಧ್ವಂಸ ಮಾಡಿತ್ತು. ಆದ್ರೆ, ಇಲ್ಲಿಯವರೆಗೂ ಯಾರು ಕೂಡ ಇತ್ತ ತಿರುಗಿ ನೋಡಿಲ್ಲ, ಕೊಟ್ಟ ಭರವಸೆ ಕೇವಲ ಭರವಸೆಯಾಗಿಯೇ ಉಳಿದುಹೋಗಿದೆ. ಇಲ್ಲಿ ಹಿಂದಿ, ಇಂಗ್ಲೀಷ್, ಗಣಿತ ಪಾಠ ಸಿಗುತ್ತಿಲ್ಲ ಎಂಬುದು ಸಮಸ್ಯೆಯಾಗಿಲ್ಲ, ಬದಲಿಗೆ ಇಂತಹ ದುಸ್ಥಿತಿಯಲ್ಲಿ ಮಕ್ಕಳು ಹೇಗೆ ಪಾಠ ಕಲಿಯಬೇಕು? ಇಂದು, ನಾಳೆ ಕುಸಿದುಬೀಳುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಶಿಕ್ಷಣ ಪಡೆಯಬೇಕು ಎಂದು ಪರಿಸ್ಥಿತಿ ನೆನೆದು ಶಿಕ್ಷಕಿ ಭಾವುಕರಾಗಿದ್ದಾರೆ.

ಕಟ್ಟಡ ಕೆಡವಿ ಇಂದಿಗೆ ಐದು ವರ್ಷಗಳೇ ಕಳೆದಿವೆ. ಮಕ್ಕಳು ಹೊರಗೆ ಅಥವಾ ವರಾಂಡಾದಲ್ಲಿ ಕುಳಿತು ಪಾಠ ಕೇಳ್ತಿದ್ದಾರೆ. ಮಳೆ, ಗಾಳಿಯನ್ನು ಲೆಕ್ಕಿಸದೆ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇದೇ ವಿಷಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರದಲ್ಲಿ ಬರೆದು ಅವರ ಕಛೇರಿಗೆ ರವಾನಿಸಲಾಗಿದೆ.

ಆರಂಭದಲ್ಲಿ 1ರಿಂದ 8ನೇ ತರಗತಿಯವರೆಗೆ ಎಂಟು ತರಗತಿ ಕೊಠಡಿಗಳನ್ನು ಶಾಲೆ ಹೊಂದಿತ್ತು. ಆದರೆ 2019ರಲ್ಲಿ ಜಾರ್ಖಂಡ್ ಸರ್ಕಾರವು ಆರು ಕೊಠಡಿಗಳನ್ನು ನೆಲಸಮಗೊಳಿಸಿದ ಕಾರಣ ಸದ್ಯ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಅಂದಿನಿಂದ ಇಂದಿನವರೆಗೆ ಒಬ್ಬ ಅಧಿಕಾರಿ ಕೂಡ ಇತ್ತ ತಲೆಹಾಕಿಲ್ಲ ಎಂದು ಶಿಕ್ಷಕಿ ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).