ಬೆಂಗಳೂರು: ರಾಜ್ಯದ ಕರೊನಾ ಸೋಂಕಿತರಿಗೆ ಎದುರಾಗುತ್ತಿರುವ ಆಮ್ಲಜನಕ ಕೊರತೆ ನೀಗಿಸಲು ರೈಲ್ವೆ ಇಲಾಖೆ ಎರಡನೇ ಆಮ್ಲಜನಕ ವಿಶೇಷ ಎಕ್ಸ್ಪ್ರೆಸ್ ರೈಲನ್ನು ರಾಜ್ಯಕ್ಕೆ ಕಳುಹಿಸುತ್ತಿದೆ.
ದಿನದಿಂದ ದಿನಕ್ಕೆ ಕರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೋಂಕಿತರಿಗೆ ಅಗತ್ಯವಿರುವ ಆಮ್ಲಜನಕದ ಕೊರತೆಯೂ ಉಂಟಾಗುತ್ತಿದೆ. ಹೀಗಾಗಿ ಖುದ್ದು ಹೈಕೋರ್ಟ್ ರಾಜ್ಯಕ್ಕೆ 1,200 ಟನ್ ಲಿಕ್ವಿಡ್ ಮೆಡಿಕಲ್ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅದರಂತೆ ಕೇಂದ್ರ ಸರ್ಕಾರ ಕಳೆದ ಮಂಗಳವಾರ (ಮೇ 11) ಮೊದಲ ಆಕ್ಸಿಜನ್ ವಿಶೇಷ ರೈಲನ್ನು ಜೆಮ್ಶೆಡ್ಪುರದಿಂದ ರಾಜ್ಯಕ್ಕೆ ಕಳುಹಿಸಲಾಗಿತ್ತು. ಅದರ ಮೂಲಕ 120 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಹೊತ್ತ 6 ಟ್ಯಾಂಕರ್ಗಳು ರಾಜ್ಯಕ್ಕೆ ಬಂದಿದ್ದವು. ಇದೀಗ ಮತ್ತೊಂದು ಆಕ್ಸಿಜನ್ ವಿಶೇಷ ರೈಲನ್ನು ಕಳುಹಿಸಲಾಗುತ್ತಿದೆ.
130 ಮೆ.ಟನ್ ಆಮ್ಲಜನಕ: ಮಂಗಳವಾರ ರಾಜ್ಯಕ್ಕೆ ಬಂದಿದ್ದ ಆಮ್ಲಜನಕ ವಿಶೇಷ ರೈಲನ್ನು ಇದೀಗ ಆಂಧ್ರಪ್ರದೇಶದ ಎಲೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಖಾಲಿ ಟ್ಯಾಂಕರ್ಗಳನ್ನು ಹೊತ್ತ ರೈಲು ಗುರುವಾರ ತೆರಳಿದ್ದು, ಅಲ್ಲಿ ಆಮ್ಲಜನಕವನ್ನು ಭರ್ತಿ ಮಾಡಿಕೊಂಡು ಭಾನುವಾರದೊಳಗೆ ರಾಜ್ಯಕ್ಕೆ ವಾಪಸ್ ಬರಲಿದೆ. ಈ ಬಾರಿ 130 ಮೆಟ್ರಿಕ್ ಟನ್ ಆಮ್ಲಜನಕ ರಾಜ್ಯಕ್ಕೆ ತರಲಾಗುತ್ತದೆ. ಹೀಗೆ ಆಂಧ್ರಪ್ರದೇಶದಿಂದ ಬರುವ ರೈಲು, ರೈಲ್ವೆ ಇಲಾಖೆ ನಿಗದಿ ಮಾಡುವ ನಿಲ್ದಾಣಗಳಿಗೆ ಮತ್ತೆ ವಾಪಸ್ ತೆರಳಲಿದೆ. ಅಲ್ಲಿಂದ ಆಮ್ಲಜನಕ ಭರ್ತಿ ಮಾಡಿಕೊಂಡು ರಾಜ್ಯಕ್ಕೆ ಮತ್ತೆ ಬರಲಿದೆ.
100 ಆಮ್ಲಜನಕ ವಿಶೇಷ ರೈಲು ಸಂಚಾರ: ದೇಶಾದ್ಯಂತ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿರುವ ರೈಲ್ವೆ ಇಲಾಖೆ, ಈವರೆಗೆ 100 ಆಮ್ಲಜನಕ ವಿಶೇಷ ರೈಲು ಸೇವೆಯನ್ನು ನೀಡಿದೆ. ಅವುಗಳಿಂದ ಒಟ್ಟು 6,260 ಮೆಟ್ರಿಕ್ ಟನ್ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಪೂರೈಸಲಾಗಿದೆ. ಅದರಲ್ಲಿ ದೆಹಲಿಗೆ 2,404 ಮೆಟ್ರಿಕ್ ಟನ್ ಆಮ್ಲಜನಕ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ 1,680 ಮೆ. ಟನ್, ಹರಿಯಾಣಕ್ಕೆ 939 ಮೆ. ಟನ್, ಮಹಾರಾಷ್ಟ್ರಕ್ಕೆ 404 ಮೆ.ಟನ್, ಮಧ್ಯಪ್ರದೇಶಕ್ಕೆ 360 ಮೆ.ಟನ್ ಲಿಕ್ವಿಡ್ ಮೆಡಿಕಲ್ ಆಮ್ಲಜನಕವನ್ನು ರೈಲಿನ ಮೂಲಕ ಸಾಗಿಸಲಾಗಿದೆ.