ಜೆರುಸಮಲೆಮ್: ಇಸ್ರೇಲ್ನಲ್ಲಿ ಕರೊನಾ ಸೋಂಕಿಗೆ ಫೈಜರ್ ಲಸಿಕೆ ಪಡೆದ 12,400ಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಕೆಲವರು ಲಸಿಕೆಯ ಎರಡನೇ ಡೋಸೇಜ್ನ್ನೂ ಪಡೆದಿದ್ದರು ಎನ್ನಲಾಗಿದೆ.
ಕರೊನಾ ಲಸಿಕೆ ಪಡೆದ 1.89 ಲಕ್ಷ ಜನರಿಗೆ ಮತ್ತೊಮ್ಮೆ ಕರೊನಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಶೇ. 6.6 ಜನರಿಗೆ ಸೋಂಕು ದೃಢವಾಗಿದೆ. ಫೈಜರ್ ಲಸಿಕೆಯ ಎರಡನೇ ಡೋಸೇಜ್ನ್ನು ಪಡೆದಿದ್ದ 69 ಮಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಲಸಿಕೆ ನಾವೆಂದುಕೊಂಡಿದ್ದಕ್ಕಿಂತ ಕಡಿಮೆ ಸಾಮರ್ಥ್ಯ ತೋರಿಸಿದೆ ಎಂದು ಸಾಂಕ್ರಾಮಿಕ ರೋಗದ ರಾಷ್ಟ್ರೀಯ ಸಂಯೋಜಕರಾದ ನಾಚ್ಮನ್ ಆಶ್ ತಿಳಿಸಿದ್ದಾರೆ.
ಇಸ್ರೇಲ್ನಲ್ಲಿ ಡಿಸೆಂಬರ್ 19ರಿಂದ ಫೈಜರ್ ಲಸಿಕೆ ವಿತರಣೆ ಮಾಡಲಾಗುತ್ತಿದೆ. 90 ಲಕ್ಷ ಜನಸಂಖ್ಯೆಯಲ್ಲಿ ಈಗಾಗಲೇ ಶೇ. 25 ಜನರಿಗೆ ಅಂದರೆ 22 ಲಕ್ಷ ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಶೇ. 3.5 ಜನರಿಗೆ ಲಸಿಕೆಯ ಎರಡನೇ ಡೋಸೇಜ್ನ್ನೂ ನೀಡಲಾಗಿದೆ. ಇನ್ನೂ ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಮತ್ತು 4,005 ಜನರು ಸೋಂಕಿಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್)