ಅಳಪ್ಪುಳ: ಇಲ್ಲಿಗೆ ಸಮೀಪದ ಹರಿಪಾದದ ಬಳಿಯ ಕಾರ್ತಿಕಪಲ್ಲಿಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹರ್ಷ (12) ಆತ್ಮಹತ್ಯೆ ಮಾಡಿಕೊಂಡವಳು. ಹೆತ್ತ ತಾಯಿಯೇ ಮಗಳಿಗೆ ಇನ್ನಿಲ್ಲದ ಕಿರುಕುಳ ಕೊಡುತ್ತಿದ್ದಳು. ಇದರಿಂದ ಬೇಸತ್ತ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಬಾಲಕಿ ತನ್ನ ತಾಯಿ ಅಶ್ವತಿ ಜತೆ ಕಾರ್ತಿಕಪಲ್ಲಿಯ ಮಹದೇವಿಕಾಡ್ನ ಚಿತ್ತೂರು ಹೌಸ್ನಲ್ಲಿ ವಾಸವಾಗಿದ್ದಳು. ಅಶ್ವತಿ ತನ್ನ ಮೊದಲನೆ ಗಂಡನಿಂದ ಬೇರ್ಪಟ್ಟು ಎರಡನೇ ಮದುವೆಯಾಗಿದ್ದಳು. ಹರ್ಷ ಈಕೆಯ ಮೊದಲ ಪತಿಗೆ ಜನಿಸಿದ್ದಳು.
ಮೊದಲ ಗಂಡನ ಮೇಲಿನ ಕೋಪ ಹಾಗೂ ಎರಡನೇ ಪತಿಯೊಂದಿಗೆ ನೆಮ್ಮದಿಯ ಜೀವನಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಅಶ್ವತಿ ತನ್ನ ಪುತ್ರಿ ಹರ್ಷಳಿಗೆ ಭಾರಿ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ.
ಈ ಬಗ್ಗೆ ಬಾಲಕಿ ಈ ಹಿಂದೆ ಪಿಂಕ್ ಪೊಲೀಸ್ಗೆ ದೂರು ನೀಡಿದ್ದಳು ಎನ್ನಲಾಗಿದೆ. ಆಗ ತಾಯಿ ಮತ್ತು ಪುತ್ರಿಯ ನಡುವೆ ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದರು. ಆದರೆ, ಇತ್ತೀಚೆಗೆ ಅಶ್ವತಿ ಮತ್ತೆ ಪುತ್ರಿಗೆ ಕಿರುಕುಳ ನೀಡಲಾರಂಭಿಸಿದ್ದಳು ಎನ್ನಲಾಗಿದೆ. ಇದರಿಂದ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ತ್ರಿಕುನ್ನಪ್ಪುಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.